ರಾವಣ
ಅಂದು ಲಕ್ಷ್ಮಣ ರೇಖೆಯನ್ನು ದಾಟಿದವಳು
ಇಂದು ಅಶೋಕ ಬನದಲಿ ಕಾಯುತ್ತಿದ್ದಾಳೆ
ಅವನ ನಾಮವನ್ನು ಬಿಡದೆ ಜಪಿಸುತ್ತಿದ್ದಾಳೆ
ಚೆಲುವಿನ ಖನಿ ಆದರೆ ಮೂರ್ಖಶಿಖಾಮಣಿ!
ಬೇಕಿತ್ತೇ ನನಗೆ ಈ ಚಾಪಲ್ಯ
ಜಗತ್ತನ್ನೇ ಗೆದ್ದ ನಾನು ಕಂಡಿಲ್ಲ ವೈಫಲ್ಯ
ಆದರೆ ಅವಳ ಕಂಡಾಗ ಮರೆತೇ ಹೋಯ್ತು
ರಾಜ್ಯ, ಸಂಪತ್ತು, ಮಡದಿ ಮತ್ತು ಕೈವಲ್ಯ
ತಂಗಿಯ ರೋದನೆಗೆ ಓಗೊಟ್ಟು
ಮಾರೀಚನೊಂದಿಗೆ ಹೊರಟಾಗ
ಮಾರುವೇಷಕ್ಕೆ ಒಂದೇ ಒಂದು ಕಾರಣವಿತ್ತು
ಆ ರಾಮನಿಗೆ ಬುದ್ದಿ ಕಲಿಸುವ ಮನಸಿತ್ತು
ಕಂಡ ಮೇಲೆ ಇವಳನ್ನು
ಮನಸು ಹಾಗೇ ಜಾರಿತು
ಹೊಸ ಕನಸು ಶುರುವಾಯಿತು
ಕಾಮವೋ, ಪ್ರೇಮವೋ
ಅವಳು ನನ್ನವಳು ಎಂದನಿಸಿತು
ಸತಿಯನ್ನು ಅರಸಿ ಬರಬಹುದೇ ಆ ರಾಮ?
ಬಂದರೆ ಆಗುವುದು ಅವನ ನಿರ್ನಾಮ
ಆದರೆ ಎಲ್ಲೋ ಅಪಸ್ವರ ಕೇಳಿಬರುತಿದೆ
ಚಿಕ್ಕದೊಂದು ಭಯ ಹುಟ್ಟುತಿದೆ
ಇವಳ ಹಿಂದೆ ಹೋದರೆ ಸಿಗುವನೇ ಯಮ?
ಇರಲಿ ಏನೇ ಇದರ ಪರಿಣಾಮ
ಸಾಯುವುದಿಲ್ಲ ತೋರಿಸಿದ ಹೊರತು ನನ್ನ ಪರಾಕ್ರಮ
ಆಗಲಾದರೂ ಸಿಗಬಹುದೇ ನನಗೆ ಅವಳ ಪ್ರೇಮ?

Comments

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ