ಕರ್ಣ
ಸೂತಪುತ್ರ ಎಂದೆನ್ನ ಕರೆದಾಗ
ಏಕೋ ಏನೋ ನನಗರಿವಿಲ್ಲದೆ
ಎದೆಯಲ್ಲಿ ಹುಟ್ಟುತ್ತಿತ್ತು ರೋಷ
ನಾನದಲ್ಲ ಎಂಬ ಹುಚ್ಚು ಭಾವವೇಶ
ಹಿಡಿಯಲು ಆ ಧನುಸ್ಸು
ಹುಟ್ಟಿರುವೆ ನಾ ಎಂಬ ಕನಸು
ನನಸಾಯಿತು ಗುರುವಿನ ಕೃಪೆಯಿಂದ
ನನ್ನ ಮೃತ್ಯು ಬರೆದಿಟ್ಟರು ಅವರ ಶಾಪದಿಂದ
ಜಗತ್ತನ್ನೇ ಎಚ್ಚರಿಸುವ ಸೂರ್ಯನಂತೆ ಪಿತ
ಕಡು ವೈರಿಯರ ತಾಯಿಯೇ ನನ್ನ ಮಾತೆ
ಹಗೆ ಧಗೆಯಲ್ಲಿ ಕಂಡವರೇ ಸೋದರರು
ಒಂದುಗೂಡಬೇಕಂತೆ ಅವರೊಂದಿಗೆ ನಾನು!
ನೆಂಟಸ್ತನ ಈಗ ನೆನಪಾಯಿತೇ, ಕೃಷ್ಣ?
ವಾತ್ಸಲ್ಯ ಈಗ ಉಕ್ಕಿತೇ, ಅಮ್ಮ?
ಎಲ್ಲಿತ್ತು ಇವೆಲ್ಲ ನಾ ಒಂಟಿ ಸಲಗದಂತಿದ್ದಾಗ?
ಏಕೆ ಬಚ್ಚಿಟ್ಟಿರಿ ಸತ್ಯವ ನನ್ನ ಅಪಮಾನವಾದಾಗ?
ಬರಿದಾದ ನನ್ನ ಕೈಯ ಹಿಡಿದು
ಮನ ಮಾನ ಧನವ ನೀಡಿದ
ಸ್ನೇಹಿತ ಎಂದು ಬಿಗಿದಪ್ಪಿದ
ವೀರರ ವೀರ ನನ್ನ ಮಿತ್ರ
ಗೊತ್ತು ಗುರಿ ಇಲ್ಲದೆ ಅಲೆಯುತ್ತಿದ್ದಾಗ
ವಿಶ್ವಾಸ ಇಟ್ಟ, ಬದುಕನ್ನು ಕೊಟ್ಟ ಗೆಳೆಯ
ನನ್ನ ಹುಟ್ಟಿಗೆ ನಿಮಗೆ ನಾ ಚಿರಋಣಿ ನಿತ್ಯ
ಸಂಬಂಧಗಳ ಮೀರುವ ಸ್ನೇಹವೆ ನನ್ನ ಸತ್ಯ
ನಾನು ಯಾರು ಎಂಬ ಗುಟ್ಟು
ಮರಣವಪ್ಪುವುದು ನನ್ನೊಂದಿಗೆ
ಇರುವುದೆಲ್ಲವ ಕೊಟ್ಟು
ದಾನಶೂರ ಮಣ್ಣಾಗುವನು ಗರ್ವದೊಂದಿಗೆ

Comments

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ