Followers

Monday, June 08, 2020

ಒಬ್ಬ ಅಂಕಿತ್ ಶರ್ಮಾ
ಒಬ್ಬಳು ಅಕ್ಬರಿ ಸಲಾಮಿ
ಸುಟ್ಟು ಬೂದಿಯಾದರು
ಯಾವುದೋ ಅವರಿಗರಿವಿಲ್ಲದ
ಸ್ವಾರ್ಥದ ಕುತಂತ್ರದ ದಗೆ-ಹೊಗೆಯಲಿ
ರಾಜಕೀಯದ ಪಗಡೆಯಾಟದಲಿ
ಜೀವಂತ ಕಾಯಿಗಳು ಜನ ಸಾಮಾನ್ಯರು
ಯಾರದೋ ಅಧಿಕಾರದ ದಾಹದಲಿ
ಕರಗಿ ಹೋದರು ಕರ ಪಾವತಿದಾರರು
ಬಲಿಯಾದರು ಮುಗ್ಧರು
ಒಬ್ಬಳು ಅಕ್ಬರಿ ಸಲಾಮಿ
ಒಬ್ಬ ಅಂಕಿತ್ ಶರ್ಮಾ
ಹರಕೆಯ ಕುರಿಗಳಾದರು
ನರಿಗಳ ಬೇಟೆಯಾಟದಲಿ
ಬೇರಿಲ್ಲದ ತತ್ವಗಳ ಎಳೆದಾಟದಲಿ
ಆದರೆ ನೆನಪಿರಲಿ!
ಉರಿಯುತ್ತಿರುವ ಬೆಂಕಿಯ ನಡುವೆ
ಇನ್ನೂ ಎದೆಯಲ್ಲಿ ಬೆಳಗುತ್ತಿಹುದು
ಮಾನವೀಯತೆಯ ದೀಪ
ಶಾಂತಿ-ಪ್ರೀತಿಯ ಮುಂದೆ ನಿಲ್ಲಲಾರದು
ಹಿಂಸೆ, ಕೋಪ-ತಾಪ!
ಕರ್ಣ
ಸೂತಪುತ್ರ ಎಂದೆನ್ನ ಕರೆದಾಗ
ಏಕೋ ಏನೋ ನನಗರಿವಿಲ್ಲದೆ
ಎದೆಯಲ್ಲಿ ಹುಟ್ಟುತ್ತಿತ್ತು ರೋಷ
ನಾನದಲ್ಲ ಎಂಬ ಹುಚ್ಚು ಭಾವವೇಶ
ಹಿಡಿಯಲು ಆ ಧನುಸ್ಸು
ಹುಟ್ಟಿರುವೆ ನಾ ಎಂಬ ಕನಸು
ನನಸಾಯಿತು ಗುರುವಿನ ಕೃಪೆಯಿಂದ
ನನ್ನ ಮೃತ್ಯು ಬರೆದಿಟ್ಟರು ಅವರ ಶಾಪದಿಂದ
ಜಗತ್ತನ್ನೇ ಎಚ್ಚರಿಸುವ ಸೂರ್ಯನಂತೆ ಪಿತ
ಕಡು ವೈರಿಯರ ತಾಯಿಯೇ ನನ್ನ ಮಾತೆ
ಹಗೆ ಧಗೆಯಲ್ಲಿ ಕಂಡವರೇ ಸೋದರರು
ಒಂದುಗೂಡಬೇಕಂತೆ ಅವರೊಂದಿಗೆ ನಾನು!
ನೆಂಟಸ್ತನ ಈಗ ನೆನಪಾಯಿತೇ, ಕೃಷ್ಣ?
ವಾತ್ಸಲ್ಯ ಈಗ ಉಕ್ಕಿತೇ, ಅಮ್ಮ?
ಎಲ್ಲಿತ್ತು ಇವೆಲ್ಲ ನಾ ಒಂಟಿ ಸಲಗದಂತಿದ್ದಾಗ?
ಏಕೆ ಬಚ್ಚಿಟ್ಟಿರಿ ಸತ್ಯವ ನನ್ನ ಅಪಮಾನವಾದಾಗ?
ಬರಿದಾದ ನನ್ನ ಕೈಯ ಹಿಡಿದು
ಮನ ಮಾನ ಧನವ ನೀಡಿದ
ಸ್ನೇಹಿತ ಎಂದು ಬಿಗಿದಪ್ಪಿದ
ವೀರರ ವೀರ ನನ್ನ ಮಿತ್ರ
ಗೊತ್ತು ಗುರಿ ಇಲ್ಲದೆ ಅಲೆಯುತ್ತಿದ್ದಾಗ
ವಿಶ್ವಾಸ ಇಟ್ಟ, ಬದುಕನ್ನು ಕೊಟ್ಟ ಗೆಳೆಯ
ನನ್ನ ಹುಟ್ಟಿಗೆ ನಿಮಗೆ ನಾ ಚಿರಋಣಿ ನಿತ್ಯ
ಸಂಬಂಧಗಳ ಮೀರುವ ಸ್ನೇಹವೆ ನನ್ನ ಸತ್ಯ
ನಾನು ಯಾರು ಎಂಬ ಗುಟ್ಟು
ಮರಣವಪ್ಪುವುದು ನನ್ನೊಂದಿಗೆ
ಇರುವುದೆಲ್ಲವ ಕೊಟ್ಟು
ದಾನಶೂರ ಮಣ್ಣಾಗುವನು ಗರ್ವದೊಂದಿಗೆ
ಮೀರಾ ಗಾನ
ಹುಚ್ಚಿಯಂತೆ ನಾನು
ಕಣ್ಣಿಗೆ ಕಾಣದವನ ನೆನೆದು
ಕುಣಿಕುಣಿದು ಕಣ್ಣೀರಿಟ್ಟಾಗ
ಜಗವು ನಗುವುದು ನನ್ನ ಕಂಡು
ತಿರುಕಳಂತೆ ನಾನು
ಕೊಳಲ ಕರೆಯ ಆಲಿಸುತ್ತಾ
ಬೀದಿ ಬೀದಿ ಅಲೆದಾಗ
ಜಗವು ಅಣಕಿಸುವುದು ನನ್ನನ್ನು
ಮೂರ್ಖಳಂತೆ ನಾನು
ಅರಮನೆಯ ಸುಖವನ್ನು ಬಿಟ್ಟು
ತಂಬೂರಿಯನ್ನು ಮೀಟುವಾಗ
ಜಗವು ಪಿಸುಗುಡುವುದು ನನ್ನ ಬಗ್ಗೆ
ದ್ರೋಹಿಯಂತೆ ನಾನು
ಮದುವೆ ಆದವನ ಮರೆತು
ನೀಲಮೇಘ ಶ್ಯಾಮನಿಗೆ ಮನಸೋತಾಗ
ಜಗವು ಎಗರಾಡುವುದು ನನ್ನ ಮೇಲೆ
ಮನದಲ್ಲಿ ಬಿರಿದ ಪ್ರೀತಿಯ ಹೂವು
ಎದೆಯಲ್ಲಿ ಉರಿವ ಭಕ್ತಿಯ ಜ್ವಾಲೆ
ಕಣ್ಣಲ್ಲಿ ಅಡಗಿಹ ನಿನ್ನ ರೂಪ
ಗಿರಿಧರ, ನಿನ್ನ ಬಿಟ್ಟರೆ ಯಾರಿಗೂ ಕಾಣದು
ನನ್ನ ಬದುಕು ನಿನ್ನದು
ಎಂದು ಬರೆದಿಟ್ಟೆ ಎಂದೋ
ಜಗವು ನಗಲಿ ಇಲ್ಲಾ ಅಳಲಿ
ನಿನ್ನನ್ನೇ ನಂಬಿ ನಡೆಯುತ್ತಿರುವೆ
ಕೃಷ್ಣಾ, ನಿನ್ನಯ ನೀಲಿಯಲ್ಲಿ ಕರುಗುವೆ
ಎದುರಾಳಿಗಳಾದರು ಅತಂತ್ರ
ಖುರ್ಚಿಯ ಹಿಡಿಯಲು ಹೂಡಿದೆವು ತಂತ್ರ
ಅಧಿಕಾರ ಬೇಕು ಎಂಬುದೇ ನಮ್ಮ ಮಂತ್ರ
ಇವೆಲ್ಲದರ ನಡುವೆ ಮರೆತೇಹೋಯ್ತು
ಜನತಂತ್ರ!
ನಿಸರ್ಗದ ಕವನ ಬರೆದೇ ಸಿದ್ಧ
ಎಂಬ ಹಠ ತೊಟ್ಟು
ಹೊರಟೆ ಹಿಡಿದು ಪೆನ್ನು ಪಟ್ಟಿ
ನದಿ ದಡಗಳ ಸೊಬಗೇ ಬೇರೆ
ಕವನಗಳಿಗೆ ಅವು ಸ್ಫೂರ್ತಿ ಧಾರೆ
ಆದರೆ ನದಿ, ಕೆರೆ, ತೊರೆ
ನಮ್ಮೂರಲ್ಲಿ ಕಾಣ ಸಿಗದು ಮಾರಾಯ್ರೆ!
ಬಂಡೆಗಲ್ಲಿನ ಸ್ಥಿಗ್ದ ಸೌಂದರ್ಯ
ಎಷ್ಟೋ ಕವನಗಳ ಹುಟ್ಟಿನ ರಹಸ್ಯ
ಆದರೆ ನಮ್ಮೂರ ಬೆರಳೆಣಿಕೆ ಬಂಡೆಗಳ ಮೇಲೆ
ಕಂಡೆ ಪ್ರೇಮಿಗಳ ವಾನರ ದಂಡೇ ದಂಡು
ಮರದ ನೆರಳ ಮಮತೆಯ ಮಡಿಲು
ಕವಿಗಳಿಗೆ ತೆರೆದಿವೆ ಸ್ವರ್ಗದ ಬಾಗಿಲು
ಆದರೆ ಕೂತರೆ ನಮ್ಮೂರ ಮರಗಳ ಕೆಳಗೆ
ಕಾಣುವುದು ವಾಹನಗಳ ಮೆರವಣಿಗೆ
ಭೂಮಿಯ ಗೊಡವೆಯೇ ಬೇಡ
ಗಗನದ ನೀಲಿಯ ನೋಡ
ಎಂದೆಣಿಸಿ ತಲೆ ಎತ್ತಿದಾಗ
ಕಂಡಿದ್ದು ಕಪ್ಪು ಹೊಗೆಯ ಕಾರ್ಮೋಡ
ಅಯ್ಯೋ ಸಾಕು ಈ ನಿಸರ್ಗದ ಕವನ!
ನಿಜವೆನಿಸುವುದು ಮನೆಯೇ ಬೃಂದಾವನ
ಬೆಚ್ಚಗಿನ ಗೂಡಲ್ಲಿ ಕೂತೇ ಮಾಡುವೆ
ಯಾವುದೋ ಕಾಲ್ಪನಿಕ ಜಗತ್ತಿನ ಅನಾವರಣ!
ಘೋರಾಕಾರದ ಮಳೆ
ಆಗ ಈಗ ಮೊಳಗುವ ಗುಡುಗು
ಅಲ್ಲಿ ಇಲ್ಲಿ ಇಣುಕುವ ಮಿಂಚು
ಮೈ ಮನಗಳಲಿ ಏನೋ ಆಹ್ಲಾದ
ಕವನ ಗೀಚುವ ಹುಚ್ಚು ಹಂಬಲ
ಇವೆಲ್ಲದರ ನಡುವೆ
ನೆನಪಾಗಲೇ ಇಲ್ಲ ನೀನು
ನೆನಪಾಗಿದ್ದು ಬೋಳು ಗುಡ್ಡ ಹಸಿರು ಕಾಡು
ಮತ್ತು ಒಂದು ತರಹದ ವಿರಹ ರಹಿತ ಹಾಡು!
ಯಶೋದೆ
ಜಗದೋದ್ದಾರನಂತೆ ನೀನು
ಶೇಷಶಯನನ ಅವತಾರವಂತೆ ನೀನು
ವಿವಿಧ ನಾಮಗಳಿಂದ ಕರೆಯಲ್ಪಟ್ಟೆ ನೀನು
ಕೃಷ್ಣ - ನನಗೆ ಮಾತ್ರ ಮುದ್ದಿನ ಕಂದ ನೀನು
ರಕ್ಕಸರ ನೀ ಸದೆ ಬಡಿದೆಯೆಂದು
ಲೋಕವು ನಿನ್ನ ಹೊಗಳುತಿರೆ
ನನ್ನ ಪುಟಾಣಿಯನ್ನು ಅಪ್ಪಿಕೊಳ್ಳಲು
ಓಡಿ ಬಂದ ಮಾತೆ ನಾನು
ಬಾಯಲ್ಲಿ ನೀ ಜಗವ ತೋರಲು
ಅಚ್ಚರಿಯಲ್ಲಿ ಮುಳುಗಿದೆ ಒಂದು ಕ್ಷಣ
ಬೆಣ್ಣೆಯ ಜೊತೆ ಹೃದಯಗಳ ಕದ್ದ
ನೀನೇ ನನಗೆ ಬ್ರಹ್ಮಾಂಡವಲ್ಲವೇನು?
ಕೇಳದೇ ನಿನಗೆ ನನ್ನ ಮಮತೆಯ ಕರೆ
ಗೋಕುಲವನ್ನು ಮರೆಸಿತೇ ಆ ಮಥುರೆ?
ಜೀವವನ್ನು ಹಿಡಿದಿಟ್ಟುಕೊಂಡು
ವ್ಯಾಕುಲದಿ ಕಾದಿಹೆನು
ನನ್ನ ಮುಕುಂದ ಒಂದು ದಿನ ಬರುವನೆಂದು
ತಾಯಿಯ ಅಳಲ ಕೇಳುವನೆಂದು
ರಾವಣ
ಅಂದು ಲಕ್ಷ್ಮಣ ರೇಖೆಯನ್ನು ದಾಟಿದವಳು
ಇಂದು ಅಶೋಕ ಬನದಲಿ ಕಾಯುತ್ತಿದ್ದಾಳೆ
ಅವನ ನಾಮವನ್ನು ಬಿಡದೆ ಜಪಿಸುತ್ತಿದ್ದಾಳೆ
ಚೆಲುವಿನ ಖನಿ ಆದರೆ ಮೂರ್ಖಶಿಖಾಮಣಿ!
ಬೇಕಿತ್ತೇ ನನಗೆ ಈ ಚಾಪಲ್ಯ
ಜಗತ್ತನ್ನೇ ಗೆದ್ದ ನಾನು ಕಂಡಿಲ್ಲ ವೈಫಲ್ಯ
ಆದರೆ ಅವಳ ಕಂಡಾಗ ಮರೆತೇ ಹೋಯ್ತು
ರಾಜ್ಯ, ಸಂಪತ್ತು, ಮಡದಿ ಮತ್ತು ಕೈವಲ್ಯ
ತಂಗಿಯ ರೋದನೆಗೆ ಓಗೊಟ್ಟು
ಮಾರೀಚನೊಂದಿಗೆ ಹೊರಟಾಗ
ಮಾರುವೇಷಕ್ಕೆ ಒಂದೇ ಒಂದು ಕಾರಣವಿತ್ತು
ಆ ರಾಮನಿಗೆ ಬುದ್ದಿ ಕಲಿಸುವ ಮನಸಿತ್ತು
ಕಂಡ ಮೇಲೆ ಇವಳನ್ನು
ಮನಸು ಹಾಗೇ ಜಾರಿತು
ಹೊಸ ಕನಸು ಶುರುವಾಯಿತು
ಕಾಮವೋ, ಪ್ರೇಮವೋ
ಅವಳು ನನ್ನವಳು ಎಂದನಿಸಿತು
ಸತಿಯನ್ನು ಅರಸಿ ಬರಬಹುದೇ ಆ ರಾಮ?
ಬಂದರೆ ಆಗುವುದು ಅವನ ನಿರ್ನಾಮ
ಆದರೆ ಎಲ್ಲೋ ಅಪಸ್ವರ ಕೇಳಿಬರುತಿದೆ
ಚಿಕ್ಕದೊಂದು ಭಯ ಹುಟ್ಟುತಿದೆ
ಇವಳ ಹಿಂದೆ ಹೋದರೆ ಸಿಗುವನೇ ಯಮ?
ಇರಲಿ ಏನೇ ಇದರ ಪರಿಣಾಮ
ಸಾಯುವುದಿಲ್ಲ ತೋರಿಸಿದ ಹೊರತು ನನ್ನ ಪರಾಕ್ರಮ
ಆಗಲಾದರೂ ಸಿಗಬಹುದೇ ನನಗೆ ಅವಳ ಪ್ರೇಮ?
(ಹಾಲಿನ ಜೊತೆ ದಿನವೂ ಹೋರಾಡುವ ಎಲ್ಲಾ ಭಗಿನಿಯರಿಗೆ ಈ ಸಾಲುಗಳನ್ನು ಸಮರ್ಪಿಸುತ್ತಿದ್ದೇನೆ)
ಹಾಲನ್ನು ಈ ಸಲ ಉಕ್ಕಲು ಬಿಡಲಾರೆ
ಎಂದು ಪಣ ತೊಟ್ಟು ನಿಂತಳು ಧೀರೆ
"ಅಮ್ಮ" ಎಂಬ ಕರೆಗೆ ಓಗೊಟ್ಟಿ ತಿರುಗಲು
ಉಕ್ಕಿ ಬೀಳುತ್ತಿತ್ತು ಹಾಲಿನ ಧಾರೆ
ಇದು ನನ್ನ ನಿನ್ನ ನಡುವಿನ ಕದನ
ಹಾಲೇ, ಇವತ್ತು ಆಗುವುದು ನಿನ್ನ ಪತನ
ಎಂದು ಹೇಳುತ್ತಿದಾಗಲೇ ಬಂತು ಒಂದು ಸಣ್ಣ ಸೀನು
ಪುಸಕ್ಕನೆ ಉಕ್ಕಿ ಬಿದ್ದ ಹಾಲು ಹೇಳಿತು "ನಾನು ತುಂಬಾ meanu"
ಸೋಲು ಒಪ್ಪದೆ ಓಬವ್ವನ ನೆನೆದು ಕಟ್ಟಿ ನಿಂತಳು ಸೆರಗನ್ನು
ಹಾಲು ಉಕ್ಕಲು ಮಿಂಚಿನಂತೆ ಆರಿಸಿದಳು ಒಲೆಯನ್ನು
ಇಂದು ನಾನು ಗೆದ್ದೆ ಎಂದು ಬೀರಿದಳು ನಗೆಯನ್ನು
ಹಾಲಿನ ವಾಸನೆ ಮೂಗಿಗೆ ಬಡಿದಾಗ ಅರಿತಳು ನಿಜವನ್ನು
ಹೋಗಿ ಹೋಗಿ ತಾನು ಆರಿಸಿದ್ದು ಇನ್ನೊಂದು ಒಲೆಯನ್ನು
"ಅಯ್ಯೋ ರಾಮ" ಎಂದು ಜೋಲಿಸಿದಳು ಮುಖವನ್ನು
ಬರಲಿ ಬರಲಿ ಹೊಸತನ
ಚಿಗುರಲಿ ಪರಿಶುದ್ದ ಗೆಳೆತನ
ನೀಗಲಿ ಪ್ರೀತಿ-ಬಾಂಧವ್ಯಗಳ ಬಡತನ
ಎಂದೆಂದಿಗೂ ಬಿಡದಿರು ನಮ್ಮತನ
ಬದುಕು ಹೀಗೆ ಹಾಡುತ್ತಿರಲಿ ತನನನ ತಾನನ
ಬೆಲ್ಲದ ಸಿಹಿಯು ಹಿತವೆನಿಸುವುದು
ಬೇವಿನ ಕಹಿಯ ಸವಿದ ಮೇಲೆ
ಸಂತೋಷದ ಬೆಲೆ ಅರಿವಾಗುವುದು
ಕಷ್ಟಗಳ ಎದುರಿಸಿ ನಿಂತ ಮೇಲೆ
ನವ ಸಂವತ್ಸರ, ನೀ ಹೇಗೇ ಬಾ
ಹಸಿರು ತೋರಣವ ಕಟ್ಟಿ
ನಿನ್ನನ್ನು ಸ್ವಾಗತಿಸುವೆವು
ನಿನ್ನನ್ನು ನಮ್ಮದಾಗಿಸುವೆವು
ಈಜಿನ ಗುರಿ ಒಂದೇ
ಈಜು ಮೋಜಿಗಿರಲಿ
ಇಲ್ಲಾ ಉಳಿವಿಗಿರಲಿ
ಈಜಿ ದಡ ಸೇರಲೇಬೇಕು
ವಜ್ರ ವೈಡೂರ್ಯಗಳಿಲ್ಲ ನನ್ನ ಬಳಿ
ಆದರೆ ಕೊಡಬಲ್ಲೆ ಎಲೆಯ ಮೇಲಿನ ಮುತ್ತಿನ ಹನಿಯನ್ನು
ಅರಮನೆಯ ವೈಭವವಿಲ್ಲ ನನ್ನ ಬಳಿ
ಆದರೆ ಸ್ವರ್ಗವ ಕಾಣಿಸಬಲ್ಲೆ ನಿಸರ್ಗದ ಮಡಿಲಲ್ಲಿ
ಶೋಕಿಯ ಗಾಡಿಗಳಿಲ್ಲ ನನ್ನ ಬಳಿ
ಆದರೆ ತೋರಿಸಬಲ್ಲೆ ಮೋಡಗಳ ತೇರನ್ನು
ಪ್ರೀತಿಯ ಪ್ರದರ್ಶಿಸಲು ಇಲ್ಲ ನನ್ನಲ್ಲಿ ಝಣಝಣ
ಆದರೆ ಕೊಡಬಲ್ಲೆ ಹೃದಯದ ಆಳದಿಂದ ಬರೆದ ಪುಟ್ಟ ಕವನ
ಚಪ್ಪಾಳೆ ಸದ್ದಿಗೆ
ಕಾತುರದಿಂದ ಕಾದ
ಕಲಾವಿದನಿಗೆ
ಅಂತರಂಗದ ಅತೃಪ್ತ ದನಿ
ಕೇಳಲೇ ಇಲ್ಲ
ಕೊನೆಗೂ ಕೇಳಿದಾಗ ಮೆಲ್ಲನೆ
ಅದನ್ನು ಮೂಲೆಗೆ ತಳ್ಳಿದ
ಅದೇ ಬೀದಿಯಲ್ಲಿ ಒಬ್ಬ ಭೈರಾಗಿ
ಏಕತಾನತೆಯಿಂದ ಹಾಡುತ್ತಿದ್ದ
ತನಗಾಗಿ, ತನ್ನ ಶಿವನಿಗಾಗಿ
ಚಪ್ಪಾಳೆಯ ಸದ್ದು ಅಡಗಿತು
ಹಾಡುವ ದನಿ ನಿಂತಿತು
ಕಲೆಗೆ ವಿದಾಯ ಹೇಳಾಯಿತು
ಅದೇ ಬೀದಿಯಲ್ಲಿ ಆ ಭೈರಾಗಿ
ಇನ್ನು ಹಾಡುತ್ತಲೇ ಇದ್ದ
ತನಗಾಗಿ, ತನ್ನ ಶಿವನಿಗಾಗಿ
ಜೀನ್ಸ್ ಪ್ಯಾಂಟ್ ಒಗೆಯಲು ಭಾರ, ನನ್ನ ನೀರೆ
ಸಾಕಾಗಿತ್ತು ನಿನಗೆ ನಮ್ಮ ಇಳಕಲ್ ಸೀರೆ
ಇತ್ತೀಚೆಗೆ ಬೇರೆ ಬರುತ್ತಿಲ್ಲ ನಳದಲ್ಲಿ ಸರಿಯಾಗಿ ಜಲಧಾರೆ
ಹಾಗೆಂದು ಮೈಕ್ರೋ ಮಿನಿಯ ಮೊರೆ ಹೋಗದಿರು ಧೀರೆ
ಆಗಲಿದೆ ಹೊಸ ವರ್ಷದ ಅನಾವರಣ
ಬನ್ನಿ ಕಟ್ಟೋಣ ಮಾವಿನ ಎಲೆಗಳ ಹಸಿರು ತೋರಣ
ಹರ್ಷ ಚಿಮ್ಮಲಿ, ಮಾಯವಾಗಲಿ ಜೀವನದ ಬಣ ಬಣ
ಬೇವು-ಬೆಲ್ಲದ ಸಿಹಿ ಕಹಿಯನು ಸವಿಯುತ ನಡೆಸೋಣ
ಈ ಸುಂದರ ಬದುಕಿನ ಪಯಣ
ನಿಟ್ಟುಸಿರಿನ ಹೋರಾಟಗಳ ಪ್ರಸಂಗಗಳಲಿ
ಪರಿಪರಿಯ ವೇಷಗಳ ಆರ್ಭಟದಲಿ
ಹಾಗೆ ತನಗರಿವಿಲ್ಲದೆ ಹಿಮ್ಮೇಳಕ್ಕೆ ಹೆಜ್ಜೆ ಹಾಕುತ್ತಿದೆ ಕಾಲ ಗೆಜ್ಜೆ
ಅಗ್ನಿ ಪರೀಕ್ಷೆ
ಹೇಗೆ ಸುಡಲಿ ನಾನು ತಾಯಿಯನ್ನು?
ಸೀತಾದೇವಿಯಲ್ಲಿ ನಾನೇ ಲೀನವಾಗಲೇ?
ಇಲ್ಲಾಅವಳಿಗೆ ಬಿಸಿ ತಾಗದಂತೆ ಸುಮ್ಮನೆ ಉರಿಯಲೇ?
ಪರೀಕ್ಷೆ ನನ್ನದೋ (ಅಗ್ನಿಯದೋ) ಸೀತಾ ಮಾತೆಯದೋ?
ಯಾರಿದೇ ಆಗಲಿ, ಕೊನೆಗೂ ಹೊತ್ತಿಕೊಂಡು ಉರಿಯುವವನು ನಾನು!
ಪುಟಗಳ ನಡುವೆ ಎಂದೋ ಬಚ್ಚಿಟ್ಟ ಹೂವು
ದೂರದಲ್ಲಿ ಎಂದೋ ಮೊಳಗಿದ ರಾಗ
ಪ್ರೀತಿಯಿಂದ ಎಂದೋ ಆಡಿದ ಮಾತು
ಎಂದೋ ಎಡವಿ ಬಿದ್ದಾಗ ಎತ್ತಿದ ಕೈ
ಎಂದೋ ಹೃದಯ ತಟ್ಟಿದ ಬೊಚ್ಚು ಬಾಯಿಯ ನಗೆ
- ಇವೇ ನನ್ನ ಮುತ್ತು ರತ್ನಗಳು
ಜಟಾಯು
ದಯಮಾಡಿ ಮನ್ನಿಸೆನ್ನನು
ರಕ್ಷಿಸಲಾಗಲಿಲ್ಲ ಆ ಮಾತೆಯನು
ಈಗಲೂ ಕಿವಿಯಲ್ಲಿ ಮೊಳಗುತ್ತಿದೆ ಅವಳ ಚೀರಾಟ
ಆ ದುಷ್ಟನ ಬಂಧಿ ಅವಳದಾಳಲ್ಲ ಎಂಬುದೇ ತೊಳಲಾಟ
ಅವಳ ನಂಬಿಕೆಯ ನೀ ಹುಸಿ ಮಾಡಬೇಡ
ಆ ನೀಚನ ತಲೆಗಳನ್ನು ಉರುಳಿಸದೇ ಬರಬೇಡ
ಹೃದಯದ ಮಿಡಿತದ ಲೆಕ್ಕ ನನಗಿಲ್ಲ
ಆದರೆ ರೆಕ್ಕೆಯ ಬಡಿತವಿಲ್ಲದ ಬಾಳು ಬೇಕಾಗಿಲ್ಲ
ಇದು ಸಾವೋ, ವರವೋ ಒಂದು ಅರಿಯೆನು
ನಿನ್ನ ಮಡಿಲಲ್ಲಿ ನಾನಿಂದು ಶರಣಾಗುವೆನು
ಓ ರಾಮ
ಸ್ವರಗಳೊಂದಿಗೆ ಸ್ನೇಹ ನಿನ್ನದು
ಭಾವಗಳೊಂದಿಗಿನ ಒಡನಾಟ ನನ್ನದು
ಸ್ವರಕ್ಕೆ ಸ್ವರವನ್ನು ನೀನು ಕೂಡಿಸಿದಾಗ
ಹೊರ ಹೊಮ್ಮುವ ಭಾವ ನನ್ನ ಅಂತರಂಗದ್ದು
ಸ್ವರ ದೊಡ್ಡದೋ, ಭಾವ ದೊಡ್ಡದೋ
ಈ ತೀರ್ಪನ್ನು ಕೊಡಲು ನಾ ಯಾರು, ನೀ ಯಾರು
ಸಂಗೀತದ ಲೋಕದಲ್ಲಿ ನಾವೆಲ್ಲ ಪಾತ್ರಧಾರಿಗಳು
ನೀ ಸ್ವರ ಹೊಮ್ಮಿಸುವ ಮಾಂತ್ರಿಕನಾದರೆ
ಭಾವಗಳಲ್ಲಿ ಮಿಂದು ಧನ್ಯರಾಗುವ ನಾವು ಶ್ರೋತೃಗಳು
ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೆಲ್ಲೂ ಜೀವ ತುಂಬುವ ನಮ್ಮ ನದಿಗಳು
ಏಳುತ್ತಾ ಬೀಳುತ್ತಾ ಜಲಪಾತವಾಗಿ ಧುಮುಕುತ್ತಾ
ರಾಜಾರೋಷವಾಗಿ ಸಾಗುವ ನಮ್ಮ ನದಿಗಳು
ನಮ್ಮ ಪಾಪಗಳನ್ನು ಮರೆಮಾಚಿ
ನಮ್ಮ ಕಲ್ಮಶಗಳನ್ನು ತೊಳೆದು
ನಮ್ಮ ದಾಹವನ್ನು ತಣಿಸಿ
ಹರಿಯುವ ನಮ್ಮ ನದಿಗಳು- ಈ ಭೂಮಿಯ ಜೀವನಾಡಿಗಳು
ಅವುಗಳ ಜೀವನದಾಸೆ ಒಂದೇ ಒಂದು
ಸಾಗರದ ಅಲೆಗಳಲಿ ಲೀನವಾಗಬೇಕೆಂದು
ಆದರೆ ಅಡ್ಡಗೋಡೆಗಳು ಹಲವು
ಹಾಗೆ ಕಡಿಮೆ ಆಗುತ್ತಿದೆ ಬಲವು
ಇನ್ನಾದರೂ ಎಚ್ಚೆತ್ತುಕೊಳ್ಳಲಿ ಜಗವು
ನದಿಗಳಿಲ್ಲದೆ ನಾವಿಲ್ಲ ಎಂದು ಬರಲಿ ಬೇಗ ಅರಿವು
ಮಲ್ಲಿಗೆಯ ಘಮಘಮದ ಮೈಸೂರು
ಹಸಿರು ಸಿರಿಯ ಗಣಿಯಾದ ಮಲೆನಾಡು
ಕಡಲ ತೀರದ ಸೌಂದರ್ಯ ಮೆರೆವ ಗೋಕರ್ಣ ಮಂಗಳೂರು
ಕಲ್ಲು ಕಲ್ಲಿನಲ್ಲೂ ರೋಚಕವಾದ ಐತಿಹಾಸಿಕ ಕಥೆಗಳಿರುವ ಹಂಪಿ ಬಾದಾಮಿ
ಸಂಗೀತದ ಸುಗಂಧವನ್ನು ಪಸರಿಸುವ ಹುಬ್ಬಳ್ಳಿ ಧಾರವಾಡ
ಮುಕುಟ ಮಣಿಗಳಾದ ಗುಲ್ಬರ್ಗ ಬೀದರ್
ಜೀವನದಿಯ ತವರೂರಾದ ರಮಣೀಯ ಕೊಡಗು
ಭೇದ ಭಾವವಿಲ್ಲದೆ ಎಲ್ಲರನ್ನು ಪೋಷಿಸುವ ಹೆಮ್ಮೆಯ ಬೆಂಗಳೂರು
ಈ ಊರುಗಳ ಬೀಡು - ನಮ್ಮ ತಾಯ್ನಾಡು
ಕರುನಾಡು
ನೋವಿನಿಂದ ಮಂಜಾದ ಕಣ್ಣುಗಳು
ಅವಮಾನದಿಂದ ನಡುಗುತ್ತಿರುವ ಕೈಗಳು
ಎದೆಯಲ್ಲಿ ಕುದಿಯುತ್ತಿರುವ ಕೋಪ
ತಟ್ಟದಿರದು ಇವರೆಲ್ಲರಿಗು ನನ್ನ ಶಾಪ
ನನ್ನ ಜೀವನ ನನ್ನದಲ್ಲ ಎಂದು ಹೇಳಲು ಇವರಾರು
ಪಣಕ್ಕಿಡಲು ಇವರಿಗೆ ಅಧಿಕಾರವಿಲ್ಲ ಎಂದು ಯಾರಿಗೆ ಹೇಳಲಿ ದೂರು
ದುರ್ಬಲರಾಗಿ ನನ್ನವರು ಕೈ ಚೆಲ್ಲಿ ನಿಂತಿಹರು
ದುಷ್ಟರೆಲ್ಲಾ ಗಹಗಹಿಸಿ ನಗುತ್ತಿರುವರು
ಬಾಗಿದ ಹೇಡಿ ತಲೆಗಳು
ಮೂಲೆಯಲ್ಲಿ ಧೂಳು ಹಿಡಿದು ಕೂತಿಹ ಗಧೆಗಳು
ತುಂಬಿದ ಸಭೆಯಲ್ಲಿ ನನ್ನದಾಗಿದೆ ಅರಣ್ಯ ರೋಧನ
ಸೀರೆಯ ಜೊತೆಯಲ್ಲಿಯೇ ಹೋಗುವುದು ನನ್ನ ಮಾನ-ಸಮ್ಮಾನ-ಪ್ರಾಣ
ಕುಸಿದು ಬಿದ್ದಿಹಳು ನಿನ್ನ ಭಗಿನಿ, ಅಚ್ಯುತ
ಕೈ ಹಿಡಿದು ಕಾಪಾಡು ನನ್ನನು, ಜಗನ್ನಾಥ
ಈ ಜೀವನದ ಆಟದಲಿ ನೀನೊಬ್ಬನೇ ಶಾಶ್ವತ
ನಿನ್ನ ನಾಮವನ್ನು ಇನ್ನೆಂದೂ ಬಿಡಲಾರೆ ಅನವರತ
ಮನದಲಿ ಹೆಪ್ಪುಗಟ್ಟಿದ ನೋವು
ಒಂದೇ ಒಂದು ಪ್ರೀತಿಯ ನೋಟಕ್ಕೆ ಕರಗಿ
ಕಾವ್ಯಾಧಾರೆಯಾಗಿ ಧುಮ್ಮಿಕ್ಕಿತು
*ಬ*ರಪೀಡಿತ ಮನಸ್ಸಾದಾಗ
*ದಾ*ರಿಯು ಸಾಗದಿದ್ದಾಗ
*ಲಾ*ಭಕ್ಕಿಂತ ನಷ್ಟದ ಗೆಳೆತನವಾದಾಗ
*ವ*ರವಾದ ಜೀವನ ಭಾರವಾದಾಗ
ಬೀಸಬೇಕು ಬದಲಾವ*ಣೆ*ಯ ಚಂಡಮಾರುತ
ಎಷ್ಟು ಜಪಮಾಲೆ ಹಿಡಿದರೂ
ನಾನು ಎಂಬ ಜಪವ ಬಿಡಲಿಲ್ಲ
ಎಷ್ಟು ತೀರ್ಥಯಾತ್ರೆ ಮಾಡಿದರೂ
ನಾನು ಎಂಬ ಸ್ಥಾನ ಪಲ್ಲಟಗೊಳ್ಳಲಿಲ್ಲ
ಎಷ್ಟು ಮಂತ್ರಗಳನ್ನು ಪಠಿಸಿದರೂ
ನಾನು ಎಂಬುದನ್ನು ಸಾರುವುದು ನಿಲ್ಲಲಿಲ್ಲ
ಮೋಕ್ಷದ ಹೆಜ್ಜೆಯ ಹುಡುಕುತ್ತಾ ಹೊರಟವ
ನಾನು ನಾನು ಎಂಬ ಮಾಯೆಯಿಂದ ಹೊರಗೆ ಬರಲೇ ಇಲ್ಲ
ಪಕ್ಕಕಿಡು ನಿನ್ನ ಗಂಟನ್ನು
ತೊರೆದು ಬಾ ನಿನ್ನ ಬಳಗವನ್ನು
ಎಂದದ್ದನ್ನು ಕೇಳಿಸಿಕೊಂಡ ಆ ಇರುವೆ
ಸಕ್ಕರೆಯ ಕಾಳನ್ನು ಬಿಸುಟು
ತನ್ನ ಶಿಸ್ತಿನ ಸಾಲನ್ನು ತೊರೆದು
ಮುಂದೆ ಆಗುವುದರ ಪರಿವಿಲ್ಲದೆ
ಖಾವಿಧಾರಿಯನ್ನು ಹಿಂಬಾಲಿಸಿತು
ಸಂತನೊಡನೆ ದಡವ ಸೇರಿತು
ಮನಗಳಲ್ಲಿ ಮನೆಗಳಲ್ಲಿ ಇರಲಿ ಸ್ವಚ್ಛತೆ
ಹೃದಯಗಳಲ್ಲಿ ನೆಲೆಸಲಿ ಮಾನವೀಯತೆ
ಸಮಯದ ಚಕ್ರಕ್ಕೆ ಸಿಲುಕಿ ಅಳಿಸಿ ಹೋಗದಿರಲಿ ಸತ್ಯದ ಕಥೆ
ನಿಮಗೆಲ್ಲ ಈ ಯುಗಾದಿ ತರಲಿ ಖುಷಿ - ನೆಮ್ಮದಿ ಜೊತೆ ಜೊತೆ
ಮರುಗುವ ಮನಸ್ಸಿನ ಮೂಲೆಯಲ್ಲಿ ಮುದುಡಿದ ಮಂದಹಾಸ
ಮೂಡಲಿ ಮುಖಚಂದ್ರಮದ ಮೇಲೆ
ಮಣ್ಣಿನ ಮುದ್ದೆ ಮತ್ತೆ ಮಣ್ಣಾಗುವ ಮುನ್ನಾ
ಮೊಳಗಲಿ ಮಾನವೀಯತೆಯ ಮಂತ್ರ

Wednesday, April 05, 2017

ಜರ್ ಎಂದು ಜಾರಿಬಿದ್ದ ನೋವಿನ ನೆನಪು
ಚುರ್ ಎಂದು ಮನಸ್ಸಿನಲ್ಲಿ ಪಿಸುಗುಡುತ್ತಿರುವಾಗ
ಗುರ್ ಎಂದು ಕೋಪ ಹೊರಗೆ ಹೊಗೆಯಾಡುತ್ತಿರುವಾಗ
ಡುರ್ ಎಂದು ಕಂದಮ್ಮ ಬೊಚ್ಚು ಬಾಯಿಂದ ನಕ್ಕಾಗ
ಪುರ್ ಎಂದು ನೋವು, ನೆನಪು ಎಲ್ಲ ಹಾರಿ ಹೋಯಿತು
ಸರ್ ಎಂದು ಜೀವ ಖುಷಿಯಲ್ಲಿ ತೇಲಿತು
ಮರುಗುವ ಮನಸ್ಸಿನ ಮೂಲೆಯಲ್ಲಿ ಮುದುಡಿದ ಮಂದಹಾಸ 
ಮೂಡಲಿ ಮುಖಚಂದ್ರಮದ ಮೇಲೆ
 ಮಣ್ಣಿನ ಮುದ್ದೆ ಮತ್ತೆ ಮಣ್ಣಾಗುವ ಮುನ್ನಾ
 ಮೊಳಗಲಿ ಮಾನವೀಯತೆಯ ಮಂತ್ರ
ನೇತ್ರ ದಾನ

ಕಣ್ಣು ತೆರೆದರೆ ಕರಗುವ ಕನಸುಗಳ
ಬೆನ್ನಟ್ಟಿ ಓಡುವ ಬದುಕಿನ ಪಯಣ ಮುಗಿದಾಗ
ಹೊಸ ಕನಸುಗಳು ಅದೇ ಕಣ್ಣಿನಲ್ಲಿ
ಇನ್ನೊಂದು ರೆಪ್ಪೆಯ ನೆರಳಲಿ
ಅರಳಲಿ

Tuesday, March 28, 2017

ಎಷ್ಟೋ ಭಾವನೆಗಳನ್ನು ಲೇಖನಿಯಿಂದ ಎಷ್ಟು ಸುಲಭವಾಗಿ ಹಂಚ್ಕೋಬಹುದು. ಆದ್ರೆ ಮಾತಾಡೋಕೆ ಹೋದ್ರೆ, ಹಾಗೆ ನಾಲಿಗೆಲೇ ಮರಗೆಟ್ಟು ಹೋಗ್ತವೆ. ಬರವಣಿಗೆಲಿ ತಪ್ಪಾದ್ರೆ, ಅದನ್ನ ಅಳಿಸಿ ಮತ್ತೆ ಬರೀಬಹುದು. ಆದ್ರೆ ನುಡಿದ ಮಾತು ಮತ್ತೆ ವಾಪಸ್ ಸರಿ ಮಾಡೋದು ಕಷ್ಟ, ಅಲ್ವಾ?

Monday, March 20, 2017

ನವಿಲು ಗರಿಯ ಬಣ್ಣಗಳನ್ನು
ತನ್ನ ಕುಂಚದಲ್ಲಿ ಹುಡುಕಲಾರದೆ ಸೋತ ಕಲಾವಿದ
ಮೆಲ್ಲಗೆ ಮುಗುಳು ನಗೆ ಬೀರಿದ - ಗರಿಯನ್ನು ಶಿರದಲ್ಲಿ ಧರಿಸಿದವ
ಹೃದಯದ ನೋವಿನ ದನಿ
ಯಾರಿಗೂ ಕಾಣದ ಹಾಗೆ ಮರೆಯಲ್ಲಿ ನಿಲ್ಲು ನೀ
ಎಂದು ಪರಿ ಪರಿಯಾಗಿ ಬೇಡಿದರೂ ಉಕ್ಕಿ ಹರಿಯಿತು
ತುಂಬಾ ಹಟಮಾರಿ ಈ ಕಂಬನಿ
ಜೀನ್ಸ್ ಪ್ಯಾಂಟ್ ಒಗೆಯಲು ಭಾರ, ನನ್ನ ನೀರೆ
ಸಾಕಾಗಿತ್ತು ನಿನಗೆ ನಮ್ಮ ಇಳಕಲ್ ಸೀರೆ
ಇತ್ತೀಚೆಗೆ ಬೇರೆ ಬರುತ್ತಿಲ್ಲ ನಳದಲ್ಲಿ ಸರಿಯಾಗಿ ಜಲಧಾರೆ 
ಹಾಗೆಂದು ಮೈಕ್ರೋ ಮಿನಿಯ ಮೊರೆ ಹೋಗದಿರು ಧೀರೆ
On the occasion of World Sparrow Day

ಗುಬ್ಬಿ, ನಮಗಾಗಿದೆ ನಿನ್ನ ಚಿಲಿಪಿಲಿಯ ಗೀಳು
ನಮ್ಮ ಮನೆಯ ಮೂಲೆಯಲ್ಲಿ ನಿನ್ನ ಅಚ್ಚುಕಟ್ಟಿನ ಗೂಡನ್ನು ಆಳು
ಕೊಡುವೆ ಬೇಕಾದಷ್ಟುಕಾಳು
ಗುಬ್ಬಿ, ನಮ್ಮ ಬೆಂಗಳೂರಿನಲ್ಲೂ ನೀ ಬಾಳು
ಗಾಜಿನ ಅರಮನೆಗಳು ಎದ್ದಿವೆ ಸಾಲು ಸಾಲು
ಅಭಿವೃದ್ಧಿಯ ನೆರಳಿನಲ್ಲಿ ಮರಗಳಿಗೆ ಉರುಳು
ಆದರೆ, ಓ ಪುಟಾಣಿ ಗೆಳೆಯ, ಜೀವನದಲ್ಲಿ ಎಂದೆಂದು ಇರುವುದು ಈ ಏಳು ಬೀಳು
ಗುಬ್ಬಿ, ಮತ್ತೆ ನಮ್ಮ ಬೆಂಗಳೂರಿನಲ್ಲಿ ನೀ ಬಂದು ಬಾಳು

Friday, June 06, 2014

ಇವತ್ತು ಅಕಸ್ಮಾತ್ತಾಗಿ ಈ ಬ್ಲಾಗ್ಗೆ ಭೇಟಿ ಕೊಟ್ಟಾಗ ಅನ್ನಿಸ್ಸಿದ್ದು " ಆರೇ! ಇದೆಲ್ಲಾ ಯಾವಾಗ ಬರೆದೆ ನಾನು?!!" ಎಷ್ಟು ಮಾಸಗಳು, ಎಷ್ಟು ವರ್ಷಗಳು ಆಯ್ತು ಇಲ್ಲಿಗೆ ಬಂದು ನಾನು! ನನ್ನ ಮೇಲೆ ನನಗೆ ಬೇಜಾರು ಆಯ್ತು. ಹಾಗೇ
ಇನ್ನೂ ಮೇಲಾದ್ರೂ ಸ್ವಲ್ಪ ಸ್ವಲ್ಪ ಶಬ್ದಗಳನ್ನು ನೇಯೊಕೆ ಶುರು ಮಾಡ್ಬೇಕು. ಈ ಬ್ಲೋಗ್‌ಗೆ ಮತ್ತೆ ಜೀವ ನೀಡ್ಬೇಕು.
ಸರಿ ಹಾಗಾದರೆ ತಡ ಯಾಕೆ? :)

Saturday, February 20, 2010

ನಟನೆ

ದೊಡ್ಡ ಪರದೆಯ ಮೇಲೆ ನಟನೆಯನ್ನು ನೋಡಿದಾಗ
ಅನ್ನಿಸಿದ್ದು
ದಿನ ನಿತ್ಯ ವಿವಿಧ ಮುಖವಾಡಗಳನ್ನು ಧರಿಸುವ
ಸಾಮಾನ್ಯ ಮನುಷ್ಯನ ಮುಂದೆ
ಈ ನಟ ನಟಿಯರು ಸಾಟಿಯೇ?

Monday, April 13, 2009

ಬ್ಲಾಗರ್

ನಾನು: ನನಗೆ ಬರೆಯೋದು ಇಷ್ಟ
ಅವರು: ಹೌದಾ? ಕವನಗಳನ್ನು ಬರಿದಿದ್ದೀರಾ?

ನಾನು: ಇಲ್ಲ
ಅವರು: ಹಾಗಾದರೆ ಕಥೆಗಳನ್ನು ಬರೆದಿರಬೇಕು

ನಾನು: ಇಲ್ಲ
ಅವರು: ಓಹ್! ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತೀರಾ?

ನಾನು: ಅಯ್ಯೋ, ಇಲ್ಲಾರೀ
ಅವರು: ಮತ್ತೆ ಇನ್ನೇನು ಬರೆಯೋಕಾಗತ್ಟೆ?!!!!!

ನಾನು: ಬ್ಲಾಗ್:)