ಮೀರಾ ಗಾನ
ಹುಚ್ಚಿಯಂತೆ ನಾನು
ಕಣ್ಣಿಗೆ ಕಾಣದವನ ನೆನೆದು
ಕುಣಿಕುಣಿದು ಕಣ್ಣೀರಿಟ್ಟಾಗ
ಜಗವು ನಗುವುದು ನನ್ನ ಕಂಡು
ತಿರುಕಳಂತೆ ನಾನು
ಕೊಳಲ ಕರೆಯ ಆಲಿಸುತ್ತಾ
ಬೀದಿ ಬೀದಿ ಅಲೆದಾಗ
ಜಗವು ಅಣಕಿಸುವುದು ನನ್ನನ್ನು
ಮೂರ್ಖಳಂತೆ ನಾನು
ಅರಮನೆಯ ಸುಖವನ್ನು ಬಿಟ್ಟು
ತಂಬೂರಿಯನ್ನು ಮೀಟುವಾಗ
ಜಗವು ಪಿಸುಗುಡುವುದು ನನ್ನ ಬಗ್ಗೆ
ದ್ರೋಹಿಯಂತೆ ನಾನು
ಮದುವೆ ಆದವನ ಮರೆತು
ನೀಲಮೇಘ ಶ್ಯಾಮನಿಗೆ ಮನಸೋತಾಗ
ಜಗವು ಎಗರಾಡುವುದು ನನ್ನ ಮೇಲೆ
ಮನದಲ್ಲಿ ಬಿರಿದ ಪ್ರೀತಿಯ ಹೂವು
ಎದೆಯಲ್ಲಿ ಉರಿವ ಭಕ್ತಿಯ ಜ್ವಾಲೆ
ಕಣ್ಣಲ್ಲಿ ಅಡಗಿಹ ನಿನ್ನ ರೂಪ
ಗಿರಿಧರ, ನಿನ್ನ ಬಿಟ್ಟರೆ ಯಾರಿಗೂ ಕಾಣದು
ನನ್ನ ಬದುಕು ನಿನ್ನದು
ಎಂದು ಬರೆದಿಟ್ಟೆ ಎಂದೋ
ಜಗವು ನಗಲಿ ಇಲ್ಲಾ ಅಳಲಿ
ನಿನ್ನನ್ನೇ ನಂಬಿ ನಡೆಯುತ್ತಿರುವೆ
ಕೃಷ್ಣಾ, ನಿನ್ನಯ ನೀಲಿಯಲ್ಲಿ ಕರುಗುವೆ

Comments

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ