ನಿಸರ್ಗದ ಕವನ ಬರೆದೇ ಸಿದ್ಧ
ಎಂಬ ಹಠ ತೊಟ್ಟು
ಹೊರಟೆ ಹಿಡಿದು ಪೆನ್ನು ಪಟ್ಟಿ
ನದಿ ದಡಗಳ ಸೊಬಗೇ ಬೇರೆ
ಕವನಗಳಿಗೆ ಅವು ಸ್ಫೂರ್ತಿ ಧಾರೆ
ಆದರೆ ನದಿ, ಕೆರೆ, ತೊರೆ
ನಮ್ಮೂರಲ್ಲಿ ಕಾಣ ಸಿಗದು ಮಾರಾಯ್ರೆ!
ಬಂಡೆಗಲ್ಲಿನ ಸ್ಥಿಗ್ದ ಸೌಂದರ್ಯ
ಎಷ್ಟೋ ಕವನಗಳ ಹುಟ್ಟಿನ ರಹಸ್ಯ
ಆದರೆ ನಮ್ಮೂರ ಬೆರಳೆಣಿಕೆ ಬಂಡೆಗಳ ಮೇಲೆ
ಕಂಡೆ ಪ್ರೇಮಿಗಳ ವಾನರ ದಂಡೇ ದಂಡು
ಮರದ ನೆರಳ ಮಮತೆಯ ಮಡಿಲು
ಕವಿಗಳಿಗೆ ತೆರೆದಿವೆ ಸ್ವರ್ಗದ ಬಾಗಿಲು
ಆದರೆ ಕೂತರೆ ನಮ್ಮೂರ ಮರಗಳ ಕೆಳಗೆ
ಕಾಣುವುದು ವಾಹನಗಳ ಮೆರವಣಿಗೆ
ಭೂಮಿಯ ಗೊಡವೆಯೇ ಬೇಡ
ಗಗನದ ನೀಲಿಯ ನೋಡ
ಎಂದೆಣಿಸಿ ತಲೆ ಎತ್ತಿದಾಗ
ಕಂಡಿದ್ದು ಕಪ್ಪು ಹೊಗೆಯ ಕಾರ್ಮೋಡ
ಅಯ್ಯೋ ಸಾಕು ಈ ನಿಸರ್ಗದ ಕವನ!
ನಿಜವೆನಿಸುವುದು ಮನೆಯೇ ಬೃಂದಾವನ
ಬೆಚ್ಚಗಿನ ಗೂಡಲ್ಲಿ ಕೂತೇ ಮಾಡುವೆ
ಯಾವುದೋ ಕಾಲ್ಪನಿಕ ಜಗತ್ತಿನ ಅನಾವರಣ!

Comments

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ