ಒಬ್ಬ ಅಂಕಿತ್ ಶರ್ಮಾ ಒಬ್ಬಳು ಅಕ್ಬರಿ ಸಲಾಮಿ ಸುಟ್ಟು ಬೂದಿಯಾದರು ಯಾವುದೋ ಅವರಿಗರಿವಿಲ್ಲದ ಸ್ವಾರ್ಥದ ಕುತಂತ್ರದ ದಗೆ-ಹೊಗೆಯಲಿ ರಾಜಕೀಯದ ಪಗಡೆಯಾಟದಲಿ ಜೀವಂತ ಕಾಯಿಗಳು ಜನ ಸಾಮಾನ್ಯರು ಯಾರದೋ ಅಧಿಕಾರದ ದಾಹದಲಿ ಕರಗಿ ಹೋದರು ಕರ ಪಾವತಿದಾರರು ಬಲಿಯಾದರು ಮುಗ್ಧರು ಒಬ್ಬಳು ಅಕ್ಬರಿ ಸಲಾಮಿ ಒಬ್ಬ ಅಂಕಿತ್ ಶರ್ಮಾ ಹರಕೆಯ ಕುರಿಗಳಾದರು ನರಿಗಳ ಬೇಟೆಯಾಟದಲಿ ಬೇರಿಲ್ಲದ ತತ್ವಗಳ ಎಳೆದಾಟದಲಿ ಆದರೆ ನೆನಪಿರಲಿ! ಉರಿಯುತ್ತಿರುವ ಬೆಂಕಿಯ ನಡುವೆ ಇನ್ನೂ ಎದೆಯಲ್ಲಿ ಬೆಳಗುತ್ತಿಹುದು ಮಾನವೀಯತೆಯ ದೀಪ ಶಾಂತಿ-ಪ್ರೀತಿಯ ಮುಂದೆ ನಿಲ್ಲಲಾರದು ಹಿಂಸೆ, ಕೋಪ-ತಾಪ!
Posts
Showing posts from June, 2020
- Get link
- X
- Other Apps
ಕರ್ಣ ಸೂತಪುತ್ರ ಎಂದೆನ್ನ ಕರೆದಾಗ ಏಕೋ ಏನೋ ನನಗರಿವಿಲ್ಲದೆ ಎದೆಯಲ್ಲಿ ಹುಟ್ಟುತ್ತಿತ್ತು ರೋಷ ನಾನದಲ್ಲ ಎಂಬ ಹುಚ್ಚು ಭಾವವೇಶ ಹಿಡಿಯಲು ಆ ಧನುಸ್ಸು ಹುಟ್ಟಿರುವೆ ನಾ ಎಂಬ ಕನಸು ನನಸಾಯಿತು ಗುರುವಿನ ಕೃಪೆಯಿಂದ ನನ್ನ ಮೃತ್ಯು ಬರೆದಿಟ್ಟರು ಅವರ ಶಾಪದಿಂದ ಜಗತ್ತನ್ನೇ ಎಚ್ಚರಿಸುವ ಸೂರ್ಯನಂತೆ ಪಿತ ಕಡು ವೈರಿಯರ ತಾಯಿಯೇ ನನ್ನ ಮಾತೆ ಹಗೆ ಧಗೆಯಲ್ಲಿ ಕಂಡವರೇ ಸೋದರರು ಒಂದುಗೂಡಬೇಕಂತೆ ಅವರೊಂದಿಗೆ ನಾನು! ನೆಂಟಸ್ತನ ಈಗ ನೆನಪಾಯಿತೇ, ಕೃಷ್ಣ? ವಾತ್ಸಲ್ಯ ಈಗ ಉಕ್ಕಿತೇ, ಅಮ್ಮ? ಎಲ್ಲಿತ್ತು ಇವೆಲ್ಲ ನಾ ಒಂಟಿ ಸಲಗದಂತಿದ್ದಾಗ? ಏಕೆ ಬಚ್ಚಿಟ್ಟಿರಿ ಸತ್ಯವ ನನ್ನ ಅಪಮಾನವಾದಾಗ? ಬರಿದಾದ ನನ್ನ ಕೈಯ ಹಿಡಿದು ಮನ ಮಾನ ಧನವ ನೀಡಿದ ಸ್ನೇಹಿತ ಎಂದು ಬಿಗಿದಪ್ಪಿದ ವೀರರ ವೀರ ನನ್ನ ಮಿತ್ರ ಗೊತ್ತು ಗುರಿ ಇಲ್ಲದೆ ಅಲೆಯುತ್ತಿದ್ದಾಗ ವಿಶ್ವಾಸ ಇಟ್ಟ, ಬದುಕನ್ನು ಕೊಟ್ಟ ಗೆಳೆಯ ನನ್ನ ಹುಟ್ಟಿಗೆ ನಿಮಗೆ ನಾ ಚಿರಋಣಿ ನಿತ್ಯ ಸಂಬಂಧಗಳ ಮೀರುವ ಸ್ನೇಹವೆ ನನ್ನ ಸತ್ಯ ನಾನು ಯಾರು ಎಂಬ ಗುಟ್ಟು ಮರಣವಪ್ಪುವುದು ನನ್ನೊಂದಿಗೆ ಇರುವುದೆಲ್ಲವ ಕೊಟ್ಟು ದಾನಶೂರ ಮಣ್ಣಾಗುವನು ಗರ್ವದೊಂದಿಗೆ
- Get link
- X
- Other Apps
ಮೀರಾ ಗಾನ ಹುಚ್ಚಿಯಂತೆ ನಾನು ಕಣ್ಣಿಗೆ ಕಾಣದವನ ನೆನೆದು ಕುಣಿಕುಣಿದು ಕಣ್ಣೀರಿಟ್ಟಾಗ ಜಗವು ನಗುವುದು ನನ್ನ ಕಂಡು ತಿರುಕಳಂತೆ ನಾನು ಕೊಳಲ ಕರೆಯ ಆಲಿಸುತ್ತಾ ಬೀದಿ ಬೀದಿ ಅಲೆದಾಗ ಜಗವು ಅಣಕಿಸುವುದು ನನ್ನನ್ನು ಮೂರ್ಖಳಂತೆ ನಾನು ಅರಮನೆಯ ಸುಖವನ್ನು ಬಿಟ್ಟು ತಂಬೂರಿಯನ್ನು ಮೀಟುವಾಗ ಜಗವು ಪಿಸುಗುಡುವುದು ನನ್ನ ಬಗ್ಗೆ ದ್ರೋಹಿಯಂತೆ ನಾನು ಮದುವೆ ಆದವನ ಮರೆತು ನೀಲಮೇಘ ಶ್ಯಾಮನಿಗೆ ಮನಸೋತಾಗ ಜಗವು ಎಗರಾಡುವುದು ನನ್ನ ಮೇಲೆ ಮನದಲ್ಲಿ ಬಿರಿದ ಪ್ರೀತಿಯ ಹೂವು ಎದೆಯಲ್ಲಿ ಉರಿವ ಭಕ್ತಿಯ ಜ್ವಾಲೆ ಕಣ್ಣಲ್ಲಿ ಅಡಗಿಹ ನಿನ್ನ ರೂಪ ಗಿರಿಧರ, ನಿನ್ನ ಬಿಟ್ಟರೆ ಯಾರಿಗೂ ಕಾಣದು ನನ್ನ ಬದುಕು ನಿನ್ನದು ಎಂದು ಬರೆದಿಟ್ಟೆ ಎಂದೋ ಜಗವು ನಗಲಿ ಇಲ್ಲಾ ಅಳಲಿ ನಿನ್ನನ್ನೇ ನಂಬಿ ನಡೆಯುತ್ತಿರುವೆ ಕೃಷ್ಣಾ, ನಿನ್ನಯ ನೀಲಿಯಲ್ಲಿ ಕರುಗುವೆ
- Get link
- X
- Other Apps
ನಿಸರ್ಗದ ಕವನ ಬರೆದೇ ಸಿದ್ಧ ಎಂಬ ಹಠ ತೊಟ್ಟು ಹೊರಟೆ ಹಿಡಿದು ಪೆನ್ನು ಪಟ್ಟಿ ನದಿ ದಡಗಳ ಸೊಬಗೇ ಬೇರೆ ಕವನಗಳಿಗೆ ಅವು ಸ್ಫೂರ್ತಿ ಧಾರೆ ಆದರೆ ನದಿ, ಕೆರೆ, ತೊರೆ ನಮ್ಮೂರಲ್ಲಿ ಕಾಣ ಸಿಗದು ಮಾರಾಯ್ರೆ! ಬಂಡೆಗಲ್ಲಿನ ಸ್ಥಿಗ್ದ ಸೌಂದರ್ಯ ಎಷ್ಟೋ ಕವನಗಳ ಹುಟ್ಟಿನ ರಹಸ್ಯ ಆದರೆ ನಮ್ಮೂರ ಬೆರಳೆಣಿಕೆ ಬಂಡೆಗಳ ಮೇಲೆ ಕಂಡೆ ಪ್ರೇಮಿಗಳ ವಾನರ ದಂಡೇ ದಂಡು ಮರದ ನೆರಳ ಮಮತೆಯ ಮಡಿಲು ಕವಿಗಳಿಗೆ ತೆರೆದಿವೆ ಸ್ವರ್ಗದ ಬಾಗಿಲು ಆದರೆ ಕೂತರೆ ನಮ್ಮೂರ ಮರಗಳ ಕೆಳಗೆ ಕಾಣುವುದು ವಾಹನಗಳ ಮೆರವಣಿಗೆ ಭೂಮಿಯ ಗೊಡವೆಯೇ ಬೇಡ ಗಗನದ ನೀಲಿಯ ನೋಡ ಎಂದೆಣಿಸಿ ತಲೆ ಎತ್ತಿದಾಗ ಕಂಡಿದ್ದು ಕಪ್ಪು ಹೊಗೆಯ ಕಾರ್ಮೋಡ ಅಯ್ಯೋ ಸಾಕು ಈ ನಿಸರ್ಗದ ಕವನ! ನಿಜವೆನಿಸುವುದು ಮನೆಯೇ ಬೃಂದಾವನ ಬೆಚ್ಚಗಿನ ಗೂಡಲ್ಲಿ ಕೂತೇ ಮಾಡುವೆ ಯಾವುದೋ ಕಾಲ್ಪನಿಕ ಜಗತ್ತಿನ ಅನಾವರಣ!
- Get link
- X
- Other Apps
ಯಶೋದೆ ಜಗದೋದ್ದಾರನಂತೆ ನೀನು ಶೇಷಶಯನನ ಅವತಾರವಂತೆ ನೀನು ವಿವಿಧ ನಾಮಗಳಿಂದ ಕರೆಯಲ್ಪಟ್ಟೆ ನೀನು ಕೃಷ್ಣ - ನನಗೆ ಮಾತ್ರ ಮುದ್ದಿನ ಕಂದ ನೀನು ರಕ್ಕಸರ ನೀ ಸದೆ ಬಡಿದೆಯೆಂದು ಲೋಕವು ನಿನ್ನ ಹೊಗಳುತಿರೆ ನನ್ನ ಪುಟಾಣಿಯನ್ನು ಅಪ್ಪಿಕೊಳ್ಳಲು ಓಡಿ ಬಂದ ಮಾತೆ ನಾನು ಬಾಯಲ್ಲಿ ನೀ ಜಗವ ತೋರಲು ಅಚ್ಚರಿಯಲ್ಲಿ ಮುಳುಗಿದೆ ಒಂದು ಕ್ಷಣ ಬೆಣ್ಣೆಯ ಜೊತೆ ಹೃದಯಗಳ ಕದ್ದ ನೀನೇ ನನಗೆ ಬ್ರಹ್ಮಾಂಡವಲ್ಲವೇನು? ಕೇಳದೇ ನಿನಗೆ ನನ್ನ ಮಮತೆಯ ಕರೆ ಗೋಕುಲವನ್ನು ಮರೆಸಿತೇ ಆ ಮಥುರೆ? ಜೀವವನ್ನು ಹಿಡಿದಿಟ್ಟುಕೊಂಡು ವ್ಯಾಕುಲದಿ ಕಾದಿಹೆನು ನನ್ನ ಮುಕುಂದ ಒಂದು ದಿನ ಬರುವನೆಂದು ತಾಯಿಯ ಅಳಲ ಕೇಳುವನೆಂದು
- Get link
- X
- Other Apps
ರಾವಣ ಅಂದು ಲಕ್ಷ್ಮಣ ರೇಖೆಯನ್ನು ದಾಟಿದವಳು ಇಂದು ಅಶೋಕ ಬನದಲಿ ಕಾಯುತ್ತಿದ್ದಾಳೆ ಅವನ ನಾಮವನ್ನು ಬಿಡದೆ ಜಪಿಸುತ್ತಿದ್ದಾಳೆ ಚೆಲುವಿನ ಖನಿ ಆದರೆ ಮೂರ್ಖಶಿಖಾಮಣಿ! ಬೇಕಿತ್ತೇ ನನಗೆ ಈ ಚಾಪಲ್ಯ ಜಗತ್ತನ್ನೇ ಗೆದ್ದ ನಾನು ಕಂಡಿಲ್ಲ ವೈಫಲ್ಯ ಆದರೆ ಅವಳ ಕಂಡಾಗ ಮರೆತೇ ಹೋಯ್ತು ರಾಜ್ಯ, ಸಂಪತ್ತು, ಮಡದಿ ಮತ್ತು ಕೈವಲ್ಯ ತಂಗಿಯ ರೋದನೆಗೆ ಓಗೊಟ್ಟು ಮಾರೀಚನೊಂದಿಗೆ ಹೊರಟಾಗ ಮಾರುವೇಷಕ್ಕೆ ಒಂದೇ ಒಂದು ಕಾರಣವಿತ್ತು ಆ ರಾಮನಿಗೆ ಬುದ್ದಿ ಕಲಿಸುವ ಮನಸಿತ್ತು ಕಂಡ ಮೇಲೆ ಇವಳನ್ನು ಮನಸು ಹಾಗೇ ಜಾರಿತು ಹೊಸ ಕನಸು ಶುರುವಾಯಿತು ಕಾಮವೋ, ಪ್ರೇಮವೋ ಅವಳು ನನ್ನವಳು ಎಂದನಿಸಿತು ಸತಿಯನ್ನು ಅರಸಿ ಬರಬಹುದೇ ಆ ರಾಮ? ಬಂದರೆ ಆಗುವುದು ಅವನ ನಿರ್ನಾಮ ಆದರೆ ಎಲ್ಲೋ ಅಪಸ್ವರ ಕೇಳಿಬರುತಿದೆ ಚಿಕ್ಕದೊಂದು ಭಯ ಹುಟ್ಟುತಿದೆ ಇವಳ ಹಿಂದೆ ಹೋದರೆ ಸಿಗುವನೇ ಯಮ? ಇರಲಿ ಏನೇ ಇದರ ಪರಿಣಾಮ ಸಾಯುವುದಿಲ್ಲ ತೋರಿಸಿದ ಹೊರತು ನನ್ನ ಪರಾಕ್ರಮ ಆಗಲಾದರೂ ಸಿಗಬಹುದೇ ನನಗೆ ಅವಳ ಪ್ರೇಮ?
- Get link
- X
- Other Apps
(ಹಾಲಿನ ಜೊತೆ ದಿನವೂ ಹೋರಾಡುವ ಎಲ್ಲಾ ಭಗಿನಿಯರಿಗೆ ಈ ಸಾಲುಗಳನ್ನು ಸಮರ್ಪಿಸುತ್ತಿದ್ದೇನೆ) ಹಾಲನ್ನು ಈ ಸಲ ಉಕ್ಕಲು ಬಿಡಲಾರೆ ಎಂದು ಪಣ ತೊಟ್ಟು ನಿಂತಳು ಧೀರೆ "ಅಮ್ಮ" ಎಂಬ ಕರೆಗೆ ಓಗೊಟ್ಟಿ ತಿರುಗಲು ಉಕ್ಕಿ ಬೀಳುತ್ತಿತ್ತು ಹಾಲಿನ ಧಾರೆ ಇದು ನನ್ನ ನಿನ್ನ ನಡುವಿನ ಕದನ ಹಾಲೇ, ಇವತ್ತು ಆಗುವುದು ನಿನ್ನ ಪತನ ಎಂದು ಹೇಳುತ್ತಿದಾಗಲೇ ಬಂತು ಒಂದು ಸಣ್ಣ ಸೀನು ಪುಸಕ್ಕನೆ ಉಕ್ಕಿ ಬಿದ್ದ ಹಾಲು ಹೇಳಿತು "ನಾನು ತುಂಬಾ meanu" ಸೋಲು ಒಪ್ಪದೆ ಓಬವ್ವನ ನೆನೆದು ಕಟ್ಟಿ ನಿಂತಳು ಸೆರಗನ್ನು ಹಾಲು ಉಕ್ಕಲು ಮಿಂಚಿನಂತೆ ಆರಿಸಿದಳು ಒಲೆಯನ್ನು ಇಂದು ನಾನು ಗೆದ್ದೆ ಎಂದು ಬೀರಿದಳು ನಗೆಯನ್ನು ಹಾಲಿನ ವಾಸನೆ ಮೂಗಿಗೆ ಬಡಿದಾಗ ಅರಿತಳು ನಿಜವನ್ನು ಹೋಗಿ ಹೋಗಿ ತಾನು ಆರಿಸಿದ್ದು ಇನ್ನೊಂದು ಒಲೆಯನ್ನು "ಅಯ್ಯೋ ರಾಮ" ಎಂದು ಜೋಲಿಸಿದಳು ಮುಖವನ್ನು
- Get link
- X
- Other Apps
ಚಪ್ಪಾಳೆ ಸದ್ದಿಗೆ ಕಾತುರದಿಂದ ಕಾದ ಕಲಾವಿದನಿಗೆ ಅಂತರಂಗದ ಅತೃಪ್ತ ದನಿ ಕೇಳಲೇ ಇಲ್ಲ ಕೊನೆಗೂ ಕೇಳಿದಾಗ ಮೆಲ್ಲನೆ ಅದನ್ನು ಮೂಲೆಗೆ ತಳ್ಳಿದ ಅದೇ ಬೀದಿಯಲ್ಲಿ ಒಬ್ಬ ಭೈರಾಗಿ ಏಕತಾನತೆಯಿಂದ ಹಾಡುತ್ತಿದ್ದ ತನಗಾಗಿ, ತನ್ನ ಶಿವನಿಗಾಗಿ ಚಪ್ಪಾಳೆಯ ಸದ್ದು ಅಡಗಿತು ಹಾಡುವ ದನಿ ನಿಂತಿತು ಕಲೆಗೆ ವಿದಾಯ ಹೇಳಾಯಿತು ಅದೇ ಬೀದಿಯಲ್ಲಿ ಆ ಭೈರಾಗಿ ಇನ್ನು ಹಾಡುತ್ತಲೇ ಇದ್ದ ತನಗಾಗಿ, ತನ್ನ ಶಿವನಿಗಾಗಿ
- Get link
- X
- Other Apps
ಜಟಾಯು ದಯಮಾಡಿ ಮನ್ನಿಸೆನ್ನನು ರಕ್ಷಿಸಲಾಗಲಿಲ್ಲ ಆ ಮಾತೆಯನು ಈಗಲೂ ಕಿವಿಯಲ್ಲಿ ಮೊಳಗುತ್ತಿದೆ ಅವಳ ಚೀರಾಟ ಆ ದುಷ್ಟನ ಬಂಧಿ ಅವಳದಾಳಲ್ಲ ಎಂಬುದೇ ತೊಳಲಾಟ ಅವಳ ನಂಬಿಕೆಯ ನೀ ಹುಸಿ ಮಾಡಬೇಡ ಆ ನೀಚನ ತಲೆಗಳನ್ನು ಉರುಳಿಸದೇ ಬರಬೇಡ ಹೃದಯದ ಮಿಡಿತದ ಲೆಕ್ಕ ನನಗಿಲ್ಲ ಆದರೆ ರೆಕ್ಕೆಯ ಬಡಿತವಿಲ್ಲದ ಬಾಳು ಬೇಕಾಗಿಲ್ಲ ಇದು ಸಾವೋ, ವರವೋ ಒಂದು ಅರಿಯೆನು ನಿನ್ನ ಮಡಿಲಲ್ಲಿ ನಾನಿಂದು ಶರಣಾಗುವೆನು ಓ ರಾಮ
- Get link
- X
- Other Apps
ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೆಲ್ಲೂ ಜೀವ ತುಂಬುವ ನಮ್ಮ ನದಿಗಳು ಏಳುತ್ತಾ ಬೀಳುತ್ತಾ ಜಲಪಾತವಾಗಿ ಧುಮುಕುತ್ತಾ ರಾಜಾರೋಷವಾಗಿ ಸಾಗುವ ನಮ್ಮ ನದಿಗಳು ನಮ್ಮ ಪಾಪಗಳನ್ನು ಮರೆಮಾಚಿ ನಮ್ಮ ಕಲ್ಮಶಗಳನ್ನು ತೊಳೆದು ನಮ್ಮ ದಾಹವನ್ನು ತಣಿಸಿ ಹರಿಯುವ ನಮ್ಮ ನದಿಗಳು- ಈ ಭೂಮಿಯ ಜೀವನಾಡಿಗಳು ಅವುಗಳ ಜೀವನದಾಸೆ ಒಂದೇ ಒಂದು ಸಾಗರದ ಅಲೆಗಳಲಿ ಲೀನವಾಗಬೇಕೆಂದು ಆದರೆ ಅಡ್ಡಗೋಡೆಗಳು ಹಲವು ಹಾಗೆ ಕಡಿಮೆ ಆಗುತ್ತಿದೆ ಬಲವು ಇನ್ನಾದರೂ ಎಚ್ಚೆತ್ತುಕೊಳ್ಳಲಿ ಜಗವು ನದಿಗಳಿಲ್ಲದೆ ನಾವಿಲ್ಲ ಎಂದು ಬರಲಿ ಬೇಗ ಅರಿವು
- Get link
- X
- Other Apps
ಮಲ್ಲಿಗೆಯ ಘಮಘಮದ ಮೈಸೂರು ಹಸಿರು ಸಿರಿಯ ಗಣಿಯಾದ ಮಲೆನಾಡು ಕಡಲ ತೀರದ ಸೌಂದರ್ಯ ಮೆರೆವ ಗೋಕರ್ಣ ಮಂಗಳೂರು ಕಲ್ಲು ಕಲ್ಲಿನಲ್ಲೂ ರೋಚಕವಾದ ಐತಿಹಾಸಿಕ ಕಥೆಗಳಿರುವ ಹಂಪಿ ಬಾದಾಮಿ ಸಂಗೀತದ ಸುಗಂಧವನ್ನು ಪಸರಿಸುವ ಹುಬ್ಬಳ್ಳಿ ಧಾರವಾಡ ಮುಕುಟ ಮಣಿಗಳಾದ ಗುಲ್ಬರ್ಗ ಬೀದರ್ ಜೀವನದಿಯ ತವರೂರಾದ ರಮಣೀಯ ಕೊಡಗು ಭೇದ ಭಾವವಿಲ್ಲದೆ ಎಲ್ಲರನ್ನು ಪೋಷಿಸುವ ಹೆಮ್ಮೆಯ ಬೆಂಗಳೂರು ಈ ಊರುಗಳ ಬೀಡು - ನಮ್ಮ ತಾಯ್ನಾಡು ಕರುನಾಡು
- Get link
- X
- Other Apps
ನೋವಿನಿಂದ ಮಂಜಾದ ಕಣ್ಣುಗಳು ಅವಮಾನದಿಂದ ನಡುಗುತ್ತಿರುವ ಕೈಗಳು ಎದೆಯಲ್ಲಿ ಕುದಿಯುತ್ತಿರುವ ಕೋಪ ತಟ್ಟದಿರದು ಇವರೆಲ್ಲರಿಗು ನನ್ನ ಶಾಪ ನನ್ನ ಜೀವನ ನನ್ನದಲ್ಲ ಎಂದು ಹೇಳಲು ಇವರಾರು ಪಣಕ್ಕಿಡಲು ಇವರಿಗೆ ಅಧಿಕಾರವಿಲ್ಲ ಎಂದು ಯಾರಿಗೆ ಹೇಳಲಿ ದೂರು ದುರ್ಬಲರಾಗಿ ನನ್ನವರು ಕೈ ಚೆಲ್ಲಿ ನಿಂತಿಹರು ದುಷ್ಟರೆಲ್ಲಾ ಗಹಗಹಿಸಿ ನಗುತ್ತಿರುವರು ಬಾಗಿದ ಹೇಡಿ ತಲೆಗಳು ಮೂಲೆಯಲ್ಲಿ ಧೂಳು ಹಿಡಿದು ಕೂತಿಹ ಗಧೆಗಳು ತುಂಬಿದ ಸಭೆಯಲ್ಲಿ ನನ್ನದಾಗಿದೆ ಅರಣ್ಯ ರೋಧನ ಸೀರೆಯ ಜೊತೆಯಲ್ಲಿಯೇ ಹೋಗುವುದು ನನ್ನ ಮಾನ-ಸಮ್ಮಾನ-ಪ್ರಾಣ ಕುಸಿದು ಬಿದ್ದಿಹಳು ನಿನ್ನ ಭಗಿನಿ, ಅಚ್ಯುತ ಕೈ ಹಿಡಿದು ಕಾಪಾಡು ನನ್ನನು, ಜಗನ್ನಾಥ ಈ ಜೀವನದ ಆಟದಲಿ ನೀನೊಬ್ಬನೇ ಶಾಶ್ವತ ನಿನ್ನ ನಾಮವನ್ನು ಇನ್ನೆಂದೂ ಬಿಡಲಾರೆ ಅನವರತ