Monday, March 20, 2017

ನವಿಲು ಗರಿಯ ಬಣ್ಣಗಳನ್ನು
ತನ್ನ ಕುಂಚದಲ್ಲಿ ಹುಡುಕಲಾರದೆ ಸೋತ ಕಲಾವಿದ
ಮೆಲ್ಲಗೆ ಮುಗುಳು ನಗೆ ಬೀರಿದ - ಗರಿಯನ್ನು ಶಿರದಲ್ಲಿ ಧರಿಸಿದವ
ಹೃದಯದ ನೋವಿನ ದನಿ
ಯಾರಿಗೂ ಕಾಣದ ಹಾಗೆ ಮರೆಯಲ್ಲಿ ನಿಲ್ಲು ನೀ
ಎಂದು ಪರಿ ಪರಿಯಾಗಿ ಬೇಡಿದರೂ ಉಕ್ಕಿ ಹರಿಯಿತು
ತುಂಬಾ ಹಟಮಾರಿ ಈ ಕಂಬನಿ
ಜೀನ್ಸ್ ಪ್ಯಾಂಟ್ ಒಗೆಯಲು ಭಾರ, ನನ್ನ ನೀರೆ
ಸಾಕಾಗಿತ್ತು ನಿನಗೆ ನಮ್ಮ ಇಳಕಲ್ ಸೀರೆ
ಇತ್ತೀಚೆಗೆ ಬೇರೆ ಬರುತ್ತಿಲ್ಲ ನಳದಲ್ಲಿ ಸರಿಯಾಗಿ ಜಲಧಾರೆ 
ಹಾಗೆಂದು ಮೈಕ್ರೋ ಮಿನಿಯ ಮೊರೆ ಹೋಗದಿರು ಧೀರೆ
On the occasion of World Sparrow Day

ಗುಬ್ಬಿ, ನಮಗಾಗಿದೆ ನಿನ್ನ ಚಿಲಿಪಿಲಿಯ ಗೀಳು
ನಮ್ಮ ಮನೆಯ ಮೂಲೆಯಲ್ಲಿ ನಿನ್ನ ಅಚ್ಚುಕಟ್ಟಿನ ಗೂಡನ್ನು ಆಳು
ಕೊಡುವೆ ಬೇಕಾದಷ್ಟುಕಾಳು
ಗುಬ್ಬಿ, ನಮ್ಮ ಬೆಂಗಳೂರಿನಲ್ಲೂ ನೀ ಬಾಳು
ಗಾಜಿನ ಅರಮನೆಗಳು ಎದ್ದಿವೆ ಸಾಲು ಸಾಲು
ಅಭಿವೃದ್ಧಿಯ ನೆರಳಿನಲ್ಲಿ ಮರಗಳಿಗೆ ಉರುಳು
ಆದರೆ, ಓ ಪುಟಾಣಿ ಗೆಳೆಯ, ಜೀವನದಲ್ಲಿ ಎಂದೆಂದು ಇರುವುದು ಈ ಏಳು ಬೀಳು
ಗುಬ್ಬಿ, ಮತ್ತೆ ನಮ್ಮ ಬೆಂಗಳೂರಿನಲ್ಲಿ ನೀ ಬಂದು ಬಾಳು

Friday, June 06, 2014

ಇವತ್ತು ಅಕಸ್ಮಾತ್ತಾಗಿ ಈ ಬ್ಲಾಗ್ಗೆ ಭೇಟಿ ಕೊಟ್ಟಾಗ ಅನ್ನಿಸ್ಸಿದ್ದು " ಆರೇ! ಇದೆಲ್ಲಾ ಯಾವಾಗ ಬರೆದೆ ನಾನು?!!" ಎಷ್ಟು ಮಾಸಗಳು, ಎಷ್ಟು ವರ್ಷಗಳು ಆಯ್ತು ಇಲ್ಲಿಗೆ ಬಂದು ನಾನು! ನನ್ನ ಮೇಲೆ ನನಗೆ ಬೇಜಾರು ಆಯ್ತು. ಹಾಗೇ
ಇನ್ನೂ ಮೇಲಾದ್ರೂ ಸ್ವಲ್ಪ ಸ್ವಲ್ಪ ಶಬ್ದಗಳನ್ನು ನೇಯೊಕೆ ಶುರು ಮಾಡ್ಬೇಕು. ಈ ಬ್ಲೋಗ್‌ಗೆ ಮತ್ತೆ ಜೀವ ನೀಡ್ಬೇಕು.
ಸರಿ ಹಾಗಾದರೆ ತಡ ಯಾಕೆ? :)

Saturday, February 20, 2010

ನಟನೆ

ದೊಡ್ಡ ಪರದೆಯ ಮೇಲೆ ನಟನೆಯನ್ನು ನೋಡಿದಾಗ
ಅನ್ನಿಸಿದ್ದು
ದಿನ ನಿತ್ಯ ವಿವಿಧ ಮುಖವಾಡಗಳನ್ನು ಧರಿಸುವ
ಸಾಮಾನ್ಯ ಮನುಷ್ಯನ ಮುಂದೆ
ಈ ನಟ ನಟಿಯರು ಸಾಟಿಯೇ?

Monday, April 13, 2009

ಬ್ಲಾಗರ್

ನಾನು: ನನಗೆ ಬರೆಯೋದು ಇಷ್ಟ
ಅವರು: ಹೌದಾ? ಕವನಗಳನ್ನು ಬರಿದಿದ್ದೀರಾ?

ನಾನು: ಇಲ್ಲ
ಅವರು: ಹಾಗಾದರೆ ಕಥೆಗಳನ್ನು ಬರೆದಿರಬೇಕು

ನಾನು: ಇಲ್ಲ
ಅವರು: ಓಹ್! ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತೀರಾ?

ನಾನು: ಅಯ್ಯೋ, ಇಲ್ಲಾರೀ
ಅವರು: ಮತ್ತೆ ಇನ್ನೇನು ಬರೆಯೋಕಾಗತ್ಟೆ?!!!!!

ನಾನು: ಬ್ಲಾಗ್:)

Wednesday, February 04, 2009

ಸುಗಮ ಸಂಗೀತದ ಧ್ರುವ ತಾರೆ ಇನ್ನಿಲ್ಲ

ನಾನು ಈ ಅಂಕಣವನ್ನು ಬರೆಯಲು ತಡಮಾಡಿದೆ. ಯಾಕೆ ಅಂದರೆ ನನಗೆ ರಾಜು ಅನಂತಸ್ವಾಮಿ ಅವರ ಧಿಡೀರ್ ಮರಣದ ಸುದ್ದಿ ಶಾಕ್ ಆಗಿ ಬಂತು. ನಾನು ಅವರನ್ನು ಭೇಟಿ ಆಗಿರಲಿಲ್ಲ. ಆದರೆ ಅವರ ತಂದೆ ಹಾಗೂ ಅಕ್ಕನ ಭೇಟಿಯಾಗುವ ಸುಯೋಗ ಒದಗಿತ್ತು. ಮೊದಲಿನಿಂದಲೂ ಅವರ ಪರಿವಾರದ ಬಗ್ಗೆ ಗೌರವ ಇತ್ತು. ಮೈಸೂರು ಅನಂತಸ್ವಾಮಿ ಅವರ ನಂತರ ರಾಜು ಅವರು ಆ ಸ್ಥಾನವನ್ನು ತುಂಬಬಹುದು ಎಂಬ ನಿರೀಕ್ಷೆ ಇದ್ದದ್ದು ಸುಳ್ಳಲ್ಲ.

ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರು ತಮ್ಮ ಸ್ವಂತ ಛಾಪನ್ನು ಮೂಡಿಸಿದ್ದರು. ಸಂಗೀತದಲ್ಲಿ ಬಹುಮುಖ ಪ್ರತಿಭೆಯುಳ್ಳವರು ಆಗಿದ್ದರು. ತಂದೆಯ ಹಾಡುಗಳನ್ನು, ರತ್ನಂ ಅವರ ಪದಗಳನ್ನು ಬಹಳ ಸುಲಲಿತವಾಗಿ ಹಾಡುತಿದ್ದರು. ಜೊತೆಯಲ್ಲಿ ಅವರದೇ ಆದ ಸಂಗೀತ ಸಂಯೋಜಿಸಿದ ಭಾವಗೀತೆಗಳನ್ನು ಕೂಡ ಹಾಡುತಿದ್ದರು, ಹಾಡಿಸುತ್ತಿದ್ದರು. ಚಿಕ್ಕಂದಿನಿಂದ ಸಂಗೀತದ ವಾತವರಣದಲ್ಲಿ ಬೆಳೆದ ಅವರಿಗೆ ಸಂಗೀತದ ಬಗ್ಗೆ ಅಪಾರ ಜ್ಞಾನವಿತ್ತು, ಪ್ರೀತಿಯಿತ್ತು. ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಕೂಡ ಕಾಲಿಟ್ಟಿದ್ದರು.
ಇಂತಾ ಬಹುಮುಖ ಪ್ರತಿಭೆಯ , ನಗುಮುಖದ ರಾಜು ಅವರಿಗೆ ಸಾಯುವ ವಯಸ್ಸು ಖಂಡಿತ ಆಗಿರಲಿಲ್ಲ. ಅವರಿಂದ ಇನ್ನೂ ಬಹಳ ನಿರೀಕ್ಷೆ ಇತ್ತು. ಆದರೆ ಯಾವ ನೋವನ್ನು ಮರೆಯಲೋ ಏನೋ,ಅವರು ಕುಡಿತದ ದಾಸರಾಗಿದ್ದರಂತೆ. ಆ ಚಟವೇ ಅವರ ಅಂತ್ಯಕ್ಕೆ ಕಾರಣವಾಯಿತು. ಅವರ ಮರಣದ ಸುದ್ದಿ ಗೊತ್ತಾದಾಗ ನನಗೆ ಅನಿಸಿದ್ದು- ಕುಡಿತದ ಚಟ ಬದಲು ಅವರು ಸಂಗೀತವನ್ನೇ ಅವಲಂಬಿಸಿದ್ದರೆ, ಇನ್ನೂ ಹಲವು ವರ್ಷಗಳವರೆಗೂ ರಾಜು ಅವರ ಸಂಗೀತದ ಸುಧೆಯನ್ನು ನಾವು ಸವಿಯಬಹುದಾಗಿತ್ತೋ ಏನೋ!

ಅವರೇ ಸಂಗೀತ ಸಂಯೋಜಿಸಿದ ಹಾಡುಗಳಲ್ಲಿ ನಂಗೆ ಬಹಳ ಪ್ರಿಯವಾಗಿದ್ದು ಎರಡು ಹಾಡುಗಳು- "ಮುಂಗಾರು ಮೋಡ ಕವಿದಾಗ, ಸಿಂಗಾರಿ ನಿನ್ನ ನೆನಪಾಗ" ಮತ್ತು " ಈ ಒಲವ ಕವನ ನಿನಗೆ ಬಾ".ಈ ಹಾಡುಗಳಲ್ಲಿ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಇಂದು ಅವರು ನಮ್ಮ ಜೊತೆಗೆ ಇಲ್ಲ, ಆದರೆ ಅವರ ಹಾಡುಗಳು, ಅವರ ಮರೆಯಲಾಗದ ದನಿ ಎಂದೆಂದಿಗೂ ನಮ್ಮ ಜೊತೆ ಇರುತ್ತದೆ.

Tuesday, January 06, 2009

ಓ ನನ್ನ ಕಂದ

ತೊದಲು ನುಡಿಗಳ ಹೇಳುತ್ತಾ
ಮೆಲ್ಲ ಮೆಲ್ಲನೆ ನಡೆಯುತ್ತಾ
ನೀ ನನ್ನೆಡೆಗೆ ಬಂದಾಗ
ಮಮತಾಮಯಿ ಆಗುವೆನು ನಾನು
ಓ ನನ್ನ ಕಂದ

ಸುತ್ತಲಿರುವ ಪರಿಸರದ ಪರಿಚಯ ಮಾಡಿಕೊಳ್ಳುತ್ತಾ
ಏಳುತ್ತಾ ಬೀಳುತ್ತಾ ಪಾಠಗಳನ್ನು ಕಲಿಯುತ್ತಾ
ತನ್ನ ಬೇಕು-ಬೇಡಗಳನ್ನು ಅರಿಯುತ್ತಾ ನೀ ನಡೆದಾಗ
ನಿನ್ನ ಗುರು ಆಗುವೆನು ನಾನು
ಓ ನನ್ನ ಕಂದ

ಜಗತ್ತನ್ನು ವಿಸ್ಮಯದ ಕಣ್ಣಿಂದ ನೋಡುತ್ತಾ
ಭೇಧ ಭಾವಗಳಿಲ್ಲದ ಪ್ರೀತಿಯನ್ನು ಸುರಿಸುತ್ತಾ
ಕ್ಷಣದಲ್ಲಿ ನೋವ ಮರೆತು ಬೊಚ್ಚು ಬಾಯಿಯ ತೋರಿಸಿ ನೀ ನಕ್ಕಾಗ
ನಿನ್ನ ಶಿಷ್ಯೆ ಆಗುವೆನು ನಾನು
ಓ ನನ್ನ ಕಂದ


ಜೀವನದ ಪಥದಲ್ಲಿ ಸುಖ ಬಂದಾಗ, ನಿನ್ನ ಹಿಂದೆ
ಕಷ್ಟ ಬಂದಾಗ, ನಿನ್ನ ಮುಂದೆ
ದಾರಿ ಕಾಣದಾಗ ನಿನ್ನ ಜೊತೆಯಲ್ಲಿ
ಎಂದೆಂದೂ ಇರುವೆ ನಾನು
ಓ ನನ್ನ ಕಂದ
Thursday, November 06, 2008

ನೀ ಇರಲು ಜೊತೆಯಲ್ಲಿ

ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ

ಚಿತ್ರ : ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ : ಆರ್. ಏನ್. ಜಯಗೋಪಾಲ್
ಸಂಗೀತ : ಎಲ್. ಎಂ. ರಂಗರಾವ್
ಹಾಡಿದವರು: ಎಸ್. ಪಿ. ಬಾಲಸುಬ್ರಮಣ್ಯಂ

ಬಹಳ ಇಂಪಾದ, ಮನಸ್ಸಿಗೆ ಹಿತ ಕೊಡುವ ಹಾಡು. ಸಾಹಿತ್ಯ ಎಷ್ಟು ಸರಳವಾಗಿದೆ. ಆದರೆ ಅಷ್ಟೆ ಆಳವಾಗಿದೆ. ನಿಷ್ಕಲ್ಮಶ ಪ್ರೀತಿಯನ್ನು ಕೊಡುವ ಬಾಳ ಸಂಗಾತಿ ಇದ್ದರೆ, ಇನ್ನೇನು ಬೇಕು? ರಂಗರಾವ್ ಅವರ ಸಂಗೀತ ಬಹಳ ಸುಮಧುರವಾಗಿದೆ. ನನಗೆ ಈ ಹಾಡು ಕೇಳಿದಾಗ, ಯಾವುದೋ ಹೂಬನದಲ್ಲಿ ಕೂತಂತೆ, ತಂಪಾದ ಗಾಳಿ ಬೀಸಿದಂತೆ ಅನುಭವವಾಗುತ್ತದೆ. ಎಸ್. ಪಿ ಅವರು ಹಾಡಿದ ಈ ಹಾಡು ನಮ್ಮನ್ನು ಬೇರೆ ಭಾವನಾಲೋಕಕ್ಕೆ ಕರೆದೊಯ್ಯುತ್ತದೆ. ನಟ ಶ್ರೀನಾಥ್ ಅವರ ಪತ್ನಿ ಗೀತ ಶ್ರೀನಾಥ್ ಗೆ, ತಮ್ಮ ಪತಿ ನಟಿಸಿದ ಹಾಡುಗಳಲ್ಲಿ ಇದು ಬಹಳ ಇಷ್ಟವಂತೆ.

ಸರಿ, ನಿಮ್ಮನ್ನು ಮನಮೆಚ್ಚಿದವರ ಜೊತೆ, ಈ ಹಾಡಿನ ಗುಂಗಿನಲ್ಲಿ ಮುಂದುವರೆಯಲು ಬಿಡುತ್ತೇನೆ. ಟಾಟಾ. :)