Followers

Wednesday, February 04, 2009

ಸುಗಮ ಸಂಗೀತದ ಧ್ರುವ ತಾರೆ ಇನ್ನಿಲ್ಲ

ನಾನು ಈ ಅಂಕಣವನ್ನು ಬರೆಯಲು ತಡಮಾಡಿದೆ. ಯಾಕೆ ಅಂದರೆ ನನಗೆ ರಾಜು ಅನಂತಸ್ವಾಮಿ ಅವರ ಧಿಡೀರ್ ಮರಣದ ಸುದ್ದಿ ಶಾಕ್ ಆಗಿ ಬಂತು. ನಾನು ಅವರನ್ನು ಭೇಟಿ ಆಗಿರಲಿಲ್ಲ. ಆದರೆ ಅವರ ತಂದೆ ಹಾಗೂ ಅಕ್ಕನ ಭೇಟಿಯಾಗುವ ಸುಯೋಗ ಒದಗಿತ್ತು. ಮೊದಲಿನಿಂದಲೂ ಅವರ ಪರಿವಾರದ ಬಗ್ಗೆ ಗೌರವ ಇತ್ತು. ಮೈಸೂರು ಅನಂತಸ್ವಾಮಿ ಅವರ ನಂತರ ರಾಜು ಅವರು ಆ ಸ್ಥಾನವನ್ನು ತುಂಬಬಹುದು ಎಂಬ ನಿರೀಕ್ಷೆ ಇದ್ದದ್ದು ಸುಳ್ಳಲ್ಲ.

ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜು ಅವರು ತಮ್ಮ ಸ್ವಂತ ಛಾಪನ್ನು ಮೂಡಿಸಿದ್ದರು. ಸಂಗೀತದಲ್ಲಿ ಬಹುಮುಖ ಪ್ರತಿಭೆಯುಳ್ಳವರು ಆಗಿದ್ದರು. ತಂದೆಯ ಹಾಡುಗಳನ್ನು, ರತ್ನಂ ಅವರ ಪದಗಳನ್ನು ಬಹಳ ಸುಲಲಿತವಾಗಿ ಹಾಡುತಿದ್ದರು. ಜೊತೆಯಲ್ಲಿ ಅವರದೇ ಆದ ಸಂಗೀತ ಸಂಯೋಜಿಸಿದ ಭಾವಗೀತೆಗಳನ್ನು ಕೂಡ ಹಾಡುತಿದ್ದರು, ಹಾಡಿಸುತ್ತಿದ್ದರು. ಚಿಕ್ಕಂದಿನಿಂದ ಸಂಗೀತದ ವಾತವರಣದಲ್ಲಿ ಬೆಳೆದ ಅವರಿಗೆ ಸಂಗೀತದ ಬಗ್ಗೆ ಅಪಾರ ಜ್ಞಾನವಿತ್ತು, ಪ್ರೀತಿಯಿತ್ತು. ಇತ್ತೀಚೆಗೆ ಸಿನಿಮಾ ಕ್ಷೇತ್ರದಲ್ಲಿ ಕೂಡ ಕಾಲಿಟ್ಟಿದ್ದರು.
ಇಂತಾ ಬಹುಮುಖ ಪ್ರತಿಭೆಯ , ನಗುಮುಖದ ರಾಜು ಅವರಿಗೆ ಸಾಯುವ ವಯಸ್ಸು ಖಂಡಿತ ಆಗಿರಲಿಲ್ಲ. ಅವರಿಂದ ಇನ್ನೂ ಬಹಳ ನಿರೀಕ್ಷೆ ಇತ್ತು. ಆದರೆ ಯಾವ ನೋವನ್ನು ಮರೆಯಲೋ ಏನೋ,ಅವರು ಕುಡಿತದ ದಾಸರಾಗಿದ್ದರಂತೆ. ಆ ಚಟವೇ ಅವರ ಅಂತ್ಯಕ್ಕೆ ಕಾರಣವಾಯಿತು. ಅವರ ಮರಣದ ಸುದ್ದಿ ಗೊತ್ತಾದಾಗ ನನಗೆ ಅನಿಸಿದ್ದು- ಕುಡಿತದ ಚಟ ಬದಲು ಅವರು ಸಂಗೀತವನ್ನೇ ಅವಲಂಬಿಸಿದ್ದರೆ, ಇನ್ನೂ ಹಲವು ವರ್ಷಗಳವರೆಗೂ ರಾಜು ಅವರ ಸಂಗೀತದ ಸುಧೆಯನ್ನು ನಾವು ಸವಿಯಬಹುದಾಗಿತ್ತೋ ಏನೋ!

ಅವರೇ ಸಂಗೀತ ಸಂಯೋಜಿಸಿದ ಹಾಡುಗಳಲ್ಲಿ ನಂಗೆ ಬಹಳ ಪ್ರಿಯವಾಗಿದ್ದು ಎರಡು ಹಾಡುಗಳು- "ಮುಂಗಾರು ಮೋಡ ಕವಿದಾಗ, ಸಿಂಗಾರಿ ನಿನ್ನ ನೆನಪಾಗ" ಮತ್ತು " ಈ ಒಲವ ಕವನ ನಿನಗೆ ಬಾ".ಈ ಹಾಡುಗಳಲ್ಲಿ ಅವರ ಕ್ರಿಯಾಶೀಲತೆ ಎದ್ದು ಕಾಣುತ್ತದೆ. ಇಂದು ಅವರು ನಮ್ಮ ಜೊತೆಗೆ ಇಲ್ಲ, ಆದರೆ ಅವರ ಹಾಡುಗಳು, ಅವರ ಮರೆಯಲಾಗದ ದನಿ ಎಂದೆಂದಿಗೂ ನಮ್ಮ ಜೊತೆ ಇರುತ್ತದೆ.

No comments: